ಕನ್ನಡ ಭಾಷೆ ಬೆಳೆಸಿ: ಪಾಟೀಲ
ಶಿಗ್ಗಾಂವಿ: ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವ ಅವಶ್ಯ ಇದೆ. ಅನ್ಯ ಭಾಷಾ ಜ್ಞಾನ ಪಡೆಯಬಾರದು ಎಂದೇನಿಲ್ಲ. ಆದರೆ, ಕನ್ನಡ ಉಳಿಸಿ, ಬೆಳೆಸುವ ಅಗತ್ಯತೆ ಇದೆ ಎಂದು ನಳಂದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಪಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಜರುಗಿದ ದಿ. ಚನ್ನವೀರಯ್ಯ ಹಿರೇಮಠ ಇವರ ಸ್ಮರಣಾರ್ಥ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್ ಪಿ.ಸಿ. ಹಿರೇಮಠ ಇವರ ದತ್ತಿ ನಿಮಿತ್ತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಮ್ಮ ನಾಡಿನಲ್ಲಿ ಅನ್ಯಭಾಷೆಗಳ ಪ್ರಭಾವ ಹೆಚ್ಚಾಗಿದ್ದು, ಅದನ್ನು ಕನ್ನಡ ಸಾಹಿತ್ಯ ಪರಿಷತ್ ತಡೆಯುವ ಪ್ರಯತ್ನದಲ್ಲಿದೆ. ಪ್ರಾಚೀನ ಭಾಷೆ ಕನ್ನಡ ನಮ್ಮ ನಿತ್ಯ ಜೀವನದ ಭಾಷೆ. ನಾವು ಅದನ್ನು ಸುಲಭವಾಗಿ ಕಲಿಯಬಹುದು. ನಾವು ಬೆಳೆಯುವ ಜೊತೆ ಜೊತೆಯಲ್ಲಿ ಕನ್ನಡವನ್ನು ಬೆಳೆಸೋಣ ಎಂದು ತಿಳಿಸಿದರು.
ರಂಭಾಪುರಿ ಕಾಲೇಜ್ ಪ್ರಾಧ್ಯಾಪಕ ಶಿವಪ್ರಕಾಶ ಬಳಿಗಾರ ಸಮಾಜ ಸುಧಾರಣೆಯಲ್ಲಿ ವಚನ ಸಾಹಿತ್ಯ ವಿಷಯವಾಗಿ ಮಾತನಾಡಿ, ಮಗು ಹುಟ್ಟಿದಾಗ ಜಗತ್ತು ಮಗುವನ್ನು ನೋಡಿ ನಗುತ್ತಿರುತ್ತದೆ. ಆದರೆ, ಮಗು ಮಾತ್ರ ಅಳುತ್ತಿರುತ್ತದೆ. ಆದರೆ ಸಾಯುವಾಗ ಜಗತ್ತು ಅಳುತ್ತಿರಬೇಕು. ಸಾಯುವವ ನಗುತ್ತಿರಬೇಕು. ಆ ರೀತಿ ಮನುಷ್ಯ ಇತರರಿಗೆ ಬೇಕಾದವನಾಗಿ ಬದುಕು ಸಾಗಿಸಬೇಕು. ಬಸವಣ್ಣ, ಅಕ್ಕಮಹಾದೇವಿ, ವಿವೇಕಾನಂದರಂತಹ ಅನೇಕ ಮಹಾನ್ ಸಾಧಕರು ಅಲ್ಪ ಆಯುಷ್ಯದವರೇ ಆದರೆ, ಅವರ ಸಾಧನೆಗಳಿಗೆ ತುಂಬಾ ದೀರ್ಘ ಆಯುಷ್ಯವಿದೆ. ಅದು ನಮ್ಮ ಜೀವನದ ಮತ್ತು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರಹೊಂದಿದೆ. ಅದಕ್ಕಿಂತ ಪೂರ್ವದಲ್ಲಿ ಕನ್ನಡ ಸಾಹಿತ್ಯ ರಾಜರು ಹಾಗೂ ಅವರನ್ನು ಹೊಗಳುವರ ಪಾಲಾಗಿತ್ತು. 12ನೇ ಶತಮಾನದಲ್ಲಿ ಆರಂಭವಾದ ವಚನ ಸಾಹಿತ್ಯವು ಸಾಮಾನ್ಯ ಜನರಲ್ಲಿಯೂ ಕನ್ನಡದ ಶಿಕ್ಷಣವನ್ನು ಸರಳವಾಗಿ ವಚನ ಸಾಹಿತ್ಯ ಮೂಡಿಸಿದ ಶೈಕ್ಷಣಿಕ ಸಮರವನ್ನೇ ಸಾರಿತು ಎಂದರೆ ತಪ್ಪಾಗಲಾರದು ಎಂದು ಬಳಿಗಾರ ಹೇಳಿದರು.
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಸಂಗೀತ ಶಿಕ್ಷಕಿ ಎಸ್.ಎಂ. ಪೂಜಾರ, ಮಲ್ಲಪ್ಪ ರಾಮಗೇರಿ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಎಸ್.ಬಿ. ಪೂಜಾರಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಬಸರಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭೀಮಣ್ಣ ಕುರ್ಸಾಪುರ, ಜನಾರ್ದನ ಬ್ರಹ್ಮಾವರ, ವಿಜಯಕುಮಾರ ಕಿಳ್ಳಿಕೇತರ, ಶಿಕ್ಷಕ ಎಸ್.ಎನ್. ಮುಗಳಿ ಹಾಗೂ ಸಾಕ್ಷರತಾ ಸಂಯೋಜಕ ಎಸ್.ಕೆ. ಹೂಗಾರ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
--
ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಹಕಾರ: ಅಭಿನಂದನೆ
ಶಿಗ್ಗಾಂವಿ: ಪಟ್ಟಣದ ವಿರಕ್ತಮಠದ ಲಿಂ. ಸಂಗನಬಸವ ಸ್ವಾಮೀಜಿಗಳ ಪುಣ್ಯಾರಾಧನೆ ನಿಮಿತ್ತ ಜರುಗಿದ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಹಕರಿಸಿದ ಎಲ್ಲರಿಗೆ ಸಮಾಜದ ಸದ್ಭಕ್ತಮಂಡಳಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದೆ.
ಎಪಿಎಂಸಿ ಸದಸ್ಯ ಎಸ್.ಕೆ. ಕಳ್ಳಿಮಠ, ಬಿ.ಎಂ. ಪಾಟೀಲ, ನ್ಯಾಯವಾದಿ ಜಿ.ಎ. ಹಿರೇಮಠ, ಶಶಿಧರ ಸುರಗಿಮಠ, ಶಿವಪ್ರಕಾಶ ಹಿರೇಮಠ, ಜಗದ್ಗುರು ರೇಣುಕಾಚಾರ್ಯ ಸೊಸೈಟಿ ಅಧ್ಯಕ್ಷ ಬಿ.ಎಸ್. ನವಲಗುಂದ, ನಿರ್ದೇಶಕ ಎಫ್.ಎನ್. ಎಲಿಗಾರ, ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ವಿ. ಸುರಗಿಮಠ, ಜನಾರ್ದನ್ ಬೃಹ್ಮಾವರ, ಮಲ್ಲಯ್ಯ ಹಿರೇಮಠ, ಸಿ.ವಿ. ಚಿಕ್ಕಮಠ, ಉಳವಯ್ಯ ಭಮ್ಮಿಗಟ್ಟಿಮಠ, ಫಕ್ಕಿರಯ್ಯ ಕುಂಬಾರಿಗಿರಿಮಠ, ವರ್ತಕರಾದ ಸಂಗಪ್ಪ ಮೊರಬದ, ಬಸವರಾಜ ಬುಳ್ಳಕ್ಕನವರ, ನೀರಲಗಿಯ ಎಂ.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿಗೆ ಸಹಾಯವಾಣಿ
ಶಿಗ್ಗಾಂವಿ: ಶಿಗ್ಗಾಂವ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಪುರಸಭೆಯಲ್ಲಿ ಕುಡಿಯುವ ನೀರಿನ ಸಹಾಯವಾಣಿ 24್ಢ7 ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕಾರಣ ಕುಡಿಯುವ ನೀರಿನ ತೊಂದರೆ ಆದಲ್ಲಿ ದೂ. ಸಂಖ್ಯೆ 08378-255703ಗೆ ದೂರು ದಾಖಲಿಸಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಚಿಣ್ಣನವರ ಪ್ರಕಟಣೆಯಲ್ಲಿ ಕೋರಿದ್ದಾರೆ.