ಜನಪದ ಸಾಹಿತ್ಯ ಬೆಳೆಸಿ: ರಮೇಶ
ಸವಣೂರು: ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ ಹಾಗೂ ಜೀವನ ಪದ್ಧತಿ ಜಾನಪದ ಸಾಹಿತ್ಯದ ಮೂಲಕ ಹೊರಹೊಮ್ಮಿದ್ದು ಈ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಆಧುನಿಕತೆಯ ಇಂದಿನ ದಿನಗಳಲ್ಲಿ ಈ ಸಾಹಿತ್ಯದ ಮುಂದುವರಿಕೆ ಕಡಿಮೆಯಾಗುತ್ತಿದ್ದು ವ್ಯಾಪಕವಾದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ತಾಪಂ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.
ಸವಣೂರಿನ ಮೊರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಆಶ್ರಯದಲ್ಲಿ ಬಸವರಾಜ ಸಿಂಧೂರ ಹಾಗೂ ಅನಸೂಯಾ ಹಾವಣಗಿ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಜರುಗಿದ ಜಾನಪದ ಸಾಹಿತ್ಯದ ಕುರಿತು ಉಪನ್ಯಾಸ ಮತ್ತು ಭಾವಗೀತೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿರುವ ಈ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎಂ.ಎಸ್. ಮರಿತಮ್ಮನವರ ಉಪನ್ಯಾಸ ನೀಡಿ ಜೀವನದ ಸಿದ್ಧಾಂತ ಹಾಗೂ ಮೌಲ್ಯಗಳ ರಕ್ಷಣೆ ಜಾನಪದ ಸಾಹಿತ್ಯದ ಮೂಲಕ ನಡೆಯಬೇಕಿದೆ. ತಂದೆ-ತಾಯಿ ಮಕ್ಕಳ, ಗುರು ಶಿಷ್ಯರ ಸಂಬಂಧ ಹೇಗಿರಬೇಕು ಎಂಬುದನ್ನು ಈ ಸಾಹಿತ್ಯ ಹಲವಾರು ಗ್ರಾಮೀಣ ಕಲೆಗಳ ಮೂಲಕ ತೋರಿಸಿಕೊಡುತ್ತದೆ. ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ತಮ್ಮ ಉಪನ್ಯಾಸಕ್ಕೆ ಮೆರಗು ತಂದರು. ಸಮಾರಂಭದ ವೇದಿಕೆಯ ಮೇಲೆ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಗೌರವ ಕಾರ್ಯದರ್ಶಿಗಳಾದ ಪ್ರಭು ಅರಗೋಳ, ಎನ್.ಎನ್. ಬಸನಾಳ, ಕೋಶಾಧ್ಯಕ್ಷ ಆನಂದ ಮತ್ತಿಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರವಿಕಿರಣ ನಾಯಕ ನಿರೂಪಿಸಿದರು.