ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖ
ಹಾವೇರಿ: ಮಗುವಿನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಲು ದೈಹಿಕ ಶಿಕ್ಷಣ ಅಗತ್ಯ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಏರ್ಪಡಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾಮಟ್ಟದ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಸ್ತು ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ದೈಹಿಕ ಶಿಕ್ಷಕರು. ಮಕ್ಕಳ ದೈಹಿಕ ಅಭಿವೃದ್ಧಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಮಾಧ್ಯಮಿಕ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆ ಮೂಲಕ ಜಿಲ್ಲೆಯ ಶಾಲೆಗಳಿಗೆ ದೈಹಿಕ ಶಿಕ್ಷಕರ ಕೊಠಡಿ, ಲ್ಯಾಬ್ರೋಟರಿ, ಟ್ರೈನಿಂಗ್ ಸೆಂಟರ್ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು. ಸಮಾರಂಭದಲ್ಲಿ ಸಾಧನ ಸರಳ ಪುಸ್ತಕ ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳು ಶಾಲೆ ಎಂಬ ತೋಟದಲ್ಲಿ ಅರಳುವ ಗುಲಾಬಿ ಹೂವುಗಳಿದ್ದಂತೆ. ಇಂತಹ ಮುಗ್ಧ ಹೂವುಗಳಿಗೆ ಶಿಕ್ಷಕರು ಅಕ್ಷರ ಎಂಬ ಜ್ಞಾನದ ನೀರು ಎರೆದು ಪೋಷಿಸುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ವಿಷಯ ಶಿಕ್ಷಕರು ಮಕ್ಕಳಿಗೆ ಪಠ್ಯದ ಜ್ಞಾನ ನೀಡಿದರೆ, ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಕಲ್ಯಾಣಕ್ಕಾಗಿ ಸಮಾಜದಲ್ಲಿ ಬದುಕುವ ನೈತಿಕ ಶಿಕ್ಷಣ ನೀಡುತ್ತಾರೆ. ಈ ಕಾರಣದಿಂದ ದೈಹಿಕ ಶಿಕ್ಷಣ ಶಿಕ್ಷಕರು ಶಿಕ್ಷಣ ಇಲಾಖೆಯ ಚೈತನ್ಯ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಓಂಕಾರಪ್ಪ ಮಾತನಾಡಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಶಿಕ್ಷಣ ಇಲಾಖೆ ಆಧಾರ ಸ್ಥಂಭ, ಶಕ್ತಿ ಎಂದು ಕೇವಲ ಬಾಯಿ ಮಾತಿನಲ್ಲಿ ಹೊಗಳಿದರೆ ಸಾಲದು, ಅವರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅಲ್ಲದೇ, ದೈಹಿಕ ಶಿಕ್ಷಕರ ಅಭಿವೃದ್ಧಿಗೆ ವೈದ್ಯನಾಥ ವರದಿ ಹಾಗೂ ವೃಂದ ನೇಮಕಾತಿ ಪ್ರಕ್ರಿಯೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಕಾಲೇಜಿನ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಜಿಲ್ಲಾ ಅಕ್ಷರ ದಾಸೋಹ ಯೋಜನಾಧಿಕಾರಿ ಝಡ್.ಎಂ. ಖಾಜಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಹೋಬಾ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ವಿವಿಧ ಅಧಿಕಾರಿಗಳನ್ನು, ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಜಗೋಪಾಲ್ ನಾಯಕ, ಖಜಾಂಚಿ ನರಸೋಜಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಎಸ್. ಹುಸೇನಿ, ಹಾನಗಲ್ಲ ಬಿಇಒ ಪ್ರಭು ಸುಣಗಾರ, ಹಿರೇಕೆರೂರ ಬಿಇಒ ಎಂ.ಸಿ. ಆನಂದ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ವಿ. ಕೋಳಿವಾಡ, ಉಪಾಧ್ಯಕ್ಷ ಎಸ್.ಯು. ಮಾಸಿ, ವಿಷಯ ಪರಿವೀಕ್ಷಕರಾದ ಎನ್.ಐ. ಇಚ್ಚಂಗಿ, ಎಂ.ಎನ್. ನಿಂಗನಗೌಡ್ರ, ಎ.ವಿ. ಚಂದ್ರಶೇಖರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವಿದ್ಯಾರ್ಥಿನಿ ಮಾಧುರಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಜೆ. ಓಲೇಕಾರ ಸ್ವಾಗತಿಸಿದರು.