ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾನದ ಹಕ್ಕಿಲ್ಲ, ಸೌಲಭ್ಯ ಸಿಕ್ಕಿಲ್ಲ!

Lingaraj Badiger
Updated On : 13 Mar 2014, 11:32 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 12
ಇವರು ಭಾರತೀಯರು, ಈ ನಾಡಿನ ಪ್ರಜೆಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳೇ ಕಳೆದಿವೆ. ಆದರೆ, ಒಂದು ಚುನಾವಣೆಯಲ್ಲೂ ಮತದಾನ ಮಾಡುವ ಹಕ್ಕು ಇವರಿಗೆ ಒಲಿಯಲೇ ಇಲ್ಲ!
ಈ ಜನರಲ್ಲಿ ರಾಷ್ಟ್ರೀಯತೆಯ ಗುರುತಿನ ಚೀಟಿಗಳಿಲ್ಲ. ಆಧಾರ ಕಾರ್ಡ್ ಅಂದರೆ ಏನೆಂದೇ ಗೊತ್ತಿಲ್ಲ. ಪಡಿತರ ವ್ಯವಸ್ಥೆಯ ಅನ್ನಭಾಗ್ಯ ಯೋಜನೆಯ ಫಲವೂ ಇವರಿಗಿಲ್ಲ. ಇವರ ಹೆಣ್ಣು ಮಕ್ಕಳಿಗೆ 'ಭಾಗ್ಯಲಕ್ಷ್ಮೀ' ಕಟಾಕ್ಷ ತೋರಿಲ್ಲ. ಶಿಕ್ಷಣದ ಜ್ಞಾನ ಇಲ್ಲವೇ ಇಲ್ಲ. ಗುಡಿಸಲು ವಾಸಿಗಳಾದರೂ ಸರ್ಕಾರ ನೆರಳು ಕಲ್ಪಿಸಿಲ್ಲ. ಆದರೂ ಇವರು ನಮ್ಮ ನಾಡಿನ ಪ್ರಜೆಗಳು. ವಿಪರ್ಯಾಸವೆಂದರೆ, ಈ ದೇಶದ ನಾಗರಿಕ ಪ್ರಜೆಗೆ ದೊರಕಬೇಕಾದ ಕನಿಷ್ಠ ಸೌಲಭ್ಯಗಳೂ ಇವರಿಂದ ಹರದಾರಿ ದೂರದಲ್ಲಿವೆ.
ಭಿಕ್ಷಾಟನೆಯೇ ಗತಿ...: ಮಲೆನಾಡಿನ ಸೆರಗಿನಲ್ಲಿ ಅಡಗಿರುವ ಅಂದಲಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನಕನಹಳ್ಳಿ ಎಂಬುದು ಕುಗ್ರಾಮ. ಇಲ್ಲಿ ಎಲ್ಲ ಸಮಾಜದ ಜನರಿದ್ದಾರೆ. ಅಲೆಮಾರಿ ಜನಾಂಗದ ದೊಂಬರು ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ ಭಾರತೀಯ ಪೌರತ್ವದ ದಾಖಲಾತಿಗಳಿಲ್ಲ. ದೊಂಬರು ಪ್ರದರ್ಶನ ಕಲೆಯ ಚಾಣಾಕ್ಷತೆ ಹೊಂದಿದ್ದು, ಹಳ್ಳಿ ಹಳ್ಳಿ ತಿರುಗಿ ಭಿಕ್ಷಾಟನೆ ಕಸುಬು ಮಾಡಿಕೊಂಡಿದ್ದಾರೆ.
ಒಟ್ಟು ಒಂಬತ್ತು ಕುಟುಂಬಗಳ ವಠಾರದ ಪ್ರತಿ ಕುಟುಂಬದಲ್ಲೂ 8-10 ಜನರಿದ್ದಾರೆ. ಮಕ್ಕಳೊಟ್ಟಿಗೆ ಸಂಚಾರ ಮಾಡಿ ಚಿಕ್ಕ ಮಕ್ಕಳಿಂದ ಚಾಣಾಕ್ಷತೆಯ ದೊಂಬರ ಪ್ರದರ್ಶನ ಕಲೆಯ ಮೂಲಕ ಗ್ರಾಮೀಣ ಬದುಕಿನ ಜನರಿಗೆ ವಿರಾಮ ಕಾಲದ ಮನರಂಜನೆ ನೀಡಿ ಅವರಿಂದ ಹಣ, ಆಹಾರ ಪಡೆದು ಬದುಕು ಕಟ್ಟಿಕೊಂಡವರು. ಇದೇ ಇವರ ಮೂಲ ವೃತ್ತಿ.
50ಕ್ಕೂ ಹೆಚ್ಚು ಜನರಿದ್ದಾರೆ: ಕುಟುಂಬದ 50ಕ್ಕೂ ಹೆಚ್ಚು ಸದಸ್ಯರು ಇದುವರೆಗಿನ ಯಾವ ಚುನಾವಣೆಲ್ಲೂ ಎಂದೂ ಮತದಾನ ಮಾಡಿಲ್ಲ. ಗ್ರಾಮದ ಬಯಲು ಜಾಗೆಯಲ್ಲಿ ಟೆಂಟ್ ಹಾಕಿಕೊಂಡು ಜೀವಿಸುತ್ತಿರುವ ಇರರ ಹೆಸರುಗಳು, ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತದಾರರ ಪಟ್ಟಿಯಲ್ಲಿ ದಾಖಲಾಗಿಲ್ಲ. ಮನೆ ಕಟ್ಟಿಕೊಳ್ಳಲು ಇವರಿಂದಾಗದು. ದುಬಾರಿ ಕಾಲದಲ್ಲಿ ಕನಿಷ್ಠ ಆದಾಯದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಇವರು ಇರುವಲ್ಲಿ ಕುಡಿಯುವ ನೀರಿಗೂ ಅನುಕೂಲತೆಯಿಲ್ಲ.
ಯಾರೂ ತಿರುಗಿ ನೋಡಿಲ್ಲ: ತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ಗಮನಕ್ಕೂ ಈ ದೊಂಬರು ಜನರ ಸ್ಥಿತಿಯನ್ನು ತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಹುಟ್ಟುವ ಮಕ್ಕಳ ಜನ್ಮ ದಾಖಲೆ ಮಾಡಿಸಬೇಕೆಂಬ ಅರಿವೂ ಇವರಿಗಿಲ್ಲ ಎಂದರೆ ಅಚ್ಚರಿಯಾದೀತು. ದಾಖಲೆಗಳಲ್ಲಿ ಎಲ್ಲೂ ಇವರ ಹೆಸರುಗಳೇ ಇಲ್ಲದ ಕಾರಣ, ಸರ್ಕಾರಿ ಸೌಲಭ್ಯಗಳು ಈ ಜನರನ್ನು ತಲುಪುತ್ತಲೇ ಇಲ್ಲ.
ಪಡಿತರ ಚೀಟಿ, ಮಕ್ಕಳಿಗೆ ಶಿಕ್ಷಣ ಮುಂತಾದ ಯಾವ ಸೌಲಭ್ಯವೂ ಸಿಗದೆ ಇವರಿನ್ನೂ ನಾಗರಿಕ ಪ್ರಪಂಚದಿಂದ ದೂರವೇ ಇದ್ದಾರೆ. ಅಧಿಕಾರಿಗಳು, ರಾಜಕಾರಣಿಗಳಲ್ಲಿ ಅಂಗಲಾಚಿದರೂ ಅನುಕಂಪ ತೋರಿಸುತ್ತಿಲ್ಲ. ಏಕೆಂದರೆ, ಇವರು ಮತದಾರರೇ ಅಲ್ಲ! ಇವರಿಗೆ ಸೌಲಭ್ಯ ಕೊಟ್ಟರೆ, ತಮಗೇನು ಲಾಭ ಎಂದು ರಾಜಕಾರಣಿಗಳು ಲೆಕ್ಕ ಹಾಕುವುದರಿಂದ, ಈ ಜನರ ಕಷ್ಟಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ತಾಲೂಕು ಆಡಳಿತ, ಗ್ರಾಪಂಗಳು ಅಲೆಮಾರಿ ಜನಾಂಗದ ಕುಟುಂಬಗಳಿಗೆ ನಾಗರಿಕ ಹಕ್ಕುಗಳನ್ನು ನೀಡಿ, ಬದುಕಿನ ಅವಕಾಶ ಕಲ್ಪಿಸಿಕೊಡಬೇಕು. ಇವರಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು.

ಸೌಲಭ್ಯ ತಲುಪುತ್ತಿಲ್ಲ...
ತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ಗಮನಕ್ಕೂ ಈ ದೊಂಬರು ಜನರ ಸ್ಥಿತಿಯನ್ನು ತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ದಾಖಲೆಗಳಲ್ಲಿ ಎಲ್ಲೂ ಇವರ ಹೆಸರುಗಳೇ ಇಲ್ಲದ ಕಾರಣ, ಸರ್ಕಾರಿ ಸೌಲಭ್ಯಗಳು ಈ ಜನರನ್ನು ತಲುಪುತ್ತಲೇ ಇಲ್ಲ.

ನೀಡಲು ಕ್ರಮ
ಹನಕನಹಳ್ಳಿಯಲ್ಲಿ ಅಲೆಮಾರಿ ಜನಾಂಗದ ದೊಂಬರ ಕುಟುಂಬಗಳು ಯಾವ ಸೌಲಭ್ಯ ಇಲ್ಲದೆ ವಾಸಿಸುತ್ತಿರುವ ಸಂಗತಿ ತಿಳಿದಿಲ್ಲ. ಅಲೆಮಾರಿ ಕುಟುಂಬಗಳ ಸಮೀಕ್ಷೆಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಗತ್ಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುವುದು.
-ಎಸ್.ಎ. ಚೌಗಲೆ
ಶಿಗ್ಗಾಂವಿ, ತಹಸೀಲ್ದಾರ್

-ಬಸವರಾಜ ಎಸ್. ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement