ಮಹಿಳೆಯರ ಪ್ರಗತಿಗೆ ಸಹಕಾರ ಅಗತ್ಯ
ರಾಣಿಬೆನ್ನೂರು: ದೇಶದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಇಂದು ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದು, ಮಹಿಳೆಯ ಸಾಧನೆ, ಸಬಲತೆಗೆ ಪುರುಷರ ಸಹಕಾರವು ಅಗತ್ಯ ಎಂದು ಅಖಿಲ ಭಾರತೀಯ ವೀರಶೈವ ಮಹಾಸಭಾದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಮ್ಮ ಕುರುವತ್ತಿ ಹೇಳಿದರು.
ಅಖಿಲ ಭಾರತೀಯ ವೀರಶೈವ ಮಹಾಸಭಾ ಕೇಂದ್ರ ಸಮಿತಿ ಬೆಂಗಳೂರು, ತಾಲೂಕು ಘಟಕ ಹಾಗೂ ಕದಳಿ ವೇದಿಕೆ ರಾಣಿಬೆನ್ನೂರು ಸಂಯುಕ್ತಾಶ್ರಯದಲ್ಲಿ ನಗರದ ಪ್ರಭುದೇವರ ಮಠದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಹಿಳೆಯರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಸ್ಥಾನಮಾನಗಳನ್ನು ನೀಡುವಲ್ಲಿ ಪುರುಷರು ತಾತ್ಸಾರ ಭಾವನೆಯನ್ನು ತಾಳುತ್ತಿರುವ ಕಾರಣ ಮಹಿಳೆ ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಲೀಲಾವತಿ ಬುಕ್ಕಶೆಟ್ರ ಮಾತನಾಡಿ, ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಒನಕೆ ಓಬವ್ವ ಹಾಗೂ ಸ್ವಾತಂತ್ರ್ಯಾ ನಂತರ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮತ್ತು ಕಲ್ಪನಾ ಚಾವ್ಲಾ ನಡೆಸಿರುವ ಹೋರಾಟಗಳು, 12ನೇ ಶತಮಾನದಲ್ಲಿ ಅಗ್ರರೆನ್ನಿಸಿಕೊಂಡಿದ್ದ ಶರಣಿಯರ ಕುರಿತು ನೆರೆದಿದ್ದ ಸಮೂಹಕ್ಕೆ ಮಹಿಳಾ ದಿನಾಚರಣೆಯ ಕುರಿತು ಅರಿವು ಮೂಡಿಸಿದರು. ಹಿರಿಯ ನ್ಯಾಯವಾದಿಗಳಾದ ಕೆ.ಎಂ. ಬಂದಮ್ಮನವರ, ಕೆ.ಎನ್. ಕೊರಧಾನ್ಯಮಠ, ಅಬಾವಿಪ ಕೇಂದ್ರ ಸಮಿತಿಯ ಚಂದ್ರಣ್ಣ ಸೊಪ್ಪಿನ, ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿದರು. ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿರುವ ಕದಳಿ ವೇದಿಕೆಯ ಗೀತಾ ಜಂಬಗಿ, ಲೀಲಾವತಿ ಬುಕ್ಕಶೆಟ್ಟಿ, ಶಾಂತಾ ಚೂಡಾಮಣಿಯವರನ್ನು ಸನ್ಮಾನಿಸಲಾಯಿತು. ಎಸ್.ಎಸ್. ರಾಮಲಿಂಗಣ್ಣನವರ, ರಾಜೇಶ ಜಂಬಗಿ, ಧಾಕ್ಷಾಯಣಮ್ಮ ಹರಪನಹಳ್ಳಿ, ಸಿ.ಪಿ. ಪಾಟೀಲ, ಎಸ್.ಜಿ. ಹಿರೇಮಠ, ಶಕುಂತಲಮ್ಮ ಜಂಬಗಿ, ಪ್ರಭುಗೌಡ ಪಾಟೀಲ, ಸುನಂದಮ್ಮ ತಿಳುವಳ್ಳಿ, ಲತಾ ಲಿಂಗದಹಳ್ಳಿ, ಗಿರಿಜಾ ದುರ್ಗದಮಠ ಉಪಸ್ಥಿತರಿದ್ದರು.