ರೋಮಾಂಚನಗೊಳಿಸಿದ ಗಾಡಾ ಸ್ಪರ್ಧೆ
ಗುತ್ತಲ: ಮಹಾಲಕ್ಷ್ಮೀ ಯುವಕ ಸಂಘದ ಆಶ್ರಯದಲ್ಲಿ ಪ್ರಥಮ ಬಾರಿಗೆ ಗುತ್ತಲ ಪಟ್ಟಣದ ಹೊರವಲಯದ ಬೆಳವಿಗಿ ರಸ್ತೆಯ ಸುಂದರವಾದ ಮೈದಾನದಲ್ಲಿ ಮಂಗಳವಾರ ರಾಜ್ಯಮಟ್ಟದ ಗಾಡಾ ಓಡಿಸುವ ಸ್ಪರ್ಧೆ ಜರುಗಿತು.
ಸ್ಪರ್ಧೆಯಲ್ಲಿ ಹಾವೇರಿ, ಶಿಗ್ಗಾಂವ, ಬ್ಯಾಡಗಿ, ರಾಣಿಬೆನ್ನೂರು, ಹಾನಗಲ್ಲ, ಹಿರೇಕೆರೂರು, ಸವಣೂರು ಸೇರಿದಂತೆ ಹುಬ್ಬಳ್ಳಿ, ದಾವಣಗೆರೆ, ಗದಗ ಹೀಗೆ ಮುಂತಾದ ಜಿಲ್ಲೆಗಳಿಂದ ಎತ್ತುಗಳು ಭಾಗವಹಿಸಿದ್ದವು.
ಬೆಳಗ್ಗೆಯಿಂದಲೇ ಪ್ರಾರಂಭವಾದ ಗಾಡಾ ಓಡಿಸುವ ಸ್ಪರ್ಧೆ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಮನರಂಜನೆ ನೀಡಿದ್ದಲ್ಲದೆ, ಸ್ಪರ್ಧೆ ರೋಮಾಂಚನಗೊಳಿಸಿತು. ಬಿಸಿಲಿನ ತಾಪ ಲೆಕ್ಕಿಸದೆ ಗಾಡಾ ಎತ್ತುಗಳ ಮಾಲೀಕರು ಎತ್ತುಗಳನ್ನು ಹುರಿದುಂಬಿಸಿದರು. ಸಂಜೆಯಾಗುತ್ತಿದ್ದಂತೆ ಅಖಾಡ ರಂಗೇರಿತು. ಸ್ಪರ್ಧೆಯಲ್ಲಿ ಒಂದು ನಿಮಿಷದಲ್ಲಿ ಕ್ರಮಿಸಿದ ದೂರವನ್ನು ಪರಿಗಣಿಸಲಾಯಿತು. ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಗುತ್ತಲ ಪಟ್ಟಣದ ಹೋರಿಗಳೇ ಮೇಲುಗೈ ಸಾಧಿಸಿದವು. ಪ್ರಥಮ ಬಹುಮಾನವನ್ನು ಗುತ್ತಲ ಪಟ್ಟಣದ ಹನುಮಂತಪ್ಪ ಸೊಮಣ್ಣವರ ಎತ್ತುಗಳು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಬಹುಮಾನ ಬಸವಂತಪ್ಪ ಮಕರಬ್ಬಿಯವರ ಎತ್ತುಗಳು, ತೃತೀಯ ಬಹುಮಾನವನ್ನು ಕಲಕಪ್ಪ ಸನದಿಯವರ ಎತ್ತುಗಳು ಪಡೆದವು.