ಶೌಚಾಲಯ ಬಳಕೆಗೆ ಮುಂದಾಗಿ: ವಡ್ಡಿನಕಟ್ಟಿ
ಹಿರೇಕೆರೂರು: ಪ್ರತಿಯೊಬ್ಬರೂ ಮನೆಗಳಲ್ಲಿ ಶೌಚಾಲಯ ಬಳಸುವುದರೊಂದಿಗೆ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಆಲದಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಎಸ್.ವಿ. ವಡ್ಡಿನಕಟ್ಟಿ ಕರೆ ನೀಡಿದರು.
ಅವರು ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಸಂಪರ್ಕ ಶಿಕ್ಷಣ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಶೌಚಾಲಯ ನಿರ್ಮಿಸಿ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ತಿಪ್ಪೆಗಳನ್ನು ವ್ಯವಸ್ಥಿತವಾಗಿ ಹಾಕಬೇಕು. ಮನೆಯ ಅಕ್ಕಪಕ್ಕಗಳಲ್ಲಿ ಹಾಕದೆ ದೂರಹಾಕಬೇಕು. ಸೊಳ್ಳೆಗಳು ಉತ್ಪತ್ತಿ ಆಗದಂತೆ ಸ್ವಚ್ಛತೆ ಕಾಪಾಡಬೇಕು. ಆ ಮೂಲಕ ಸಾಂಕ್ರಾಮಿಕ ರೋಗ ತಡಗಟ್ಟಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಡಾ. ಶಫಿವುಲ್ಲಾ ಷರೀಫ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮದುವೆ ಮಾಡುವುದು ಅಪರಾಧ. ತಾಯಿ ಮಗು ಸುರಕ್ಷತೆ ಮತ್ತು ಭ್ರೂಣ ಹತ್ಯೆ, ಲಿಂಗ ಪತ್ತೆಯ ಬಗ್ಗೆ ವಿವರಿಸಿದರು. ವಿ.ಪಿ. ಹಾವೇರಿ ಆರೋಗ್ಯ ಕಾಪಾಡುವುದರ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಮ್ಮ ಮಾಳಿಗೇರ ಅಧ್ಯಕ್ಷತೆ ವಹಿಸಿದ್ದರು. ಪಿ.ಬಿ. ಹಲಗೇರಿ, ಗಂಗಮ್ಮ ಬಡಿಗೇರ, ಪೂರ್ಣಿಮಾ ಮಡಿವಾಳರ, ಎನ್.ಎಸ್.ಪಿ. ದೋಣಿ, ರುದ್ರಮ್ಮ, ಆಶಾ, ಸುನಂದಾ ವಿ, ಗಂಗಪ್ಪನವರ ಹುಳ್ಳೆಪ್ಪನವರ, ಶಶಿಕಲಾ ಕಾಟೇನಹಳ್ಳಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.