ಅರ್ಚಕರ ಬೇಡಿಕೆ ಈಡೇರಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 13
ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರಿಗೆ ಗುರುತಿನ ಚೀಟಿ ಮತ್ತು ಖಾಸಗಿ ದೇವಸ್ಥಾನಗಳ ಅರ್ಚಕರಿಗೆ ಮಾಸಾಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಅರ್ಚಕರು, ಕೆಇಬಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ಹೆದ್ದಾರಿ-4ರ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಅಲ್ಲಿ ಕೆಲಹೊತ್ತು ಪ್ರತಿಭಟಿಸಿದರು. ಮೆರವಣಿಗೆ ಉದ್ದಕ್ಕೂ ಮುಜರಾಯಿ ಇಲಾಖೆ ಸಚಿವ ಪ್ರಕಾಶ ಹುಕ್ಕೇರಿ, ಸಿ.ಎಂ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ನೇತೃತ್ವವಹಿಸಿದ್ದ ಮುಜರಾಯಿ ದೇವಾಲಯಗಳ ಅರ್ಚಕರ ಹಾಗೂ ಆಗಮಿಕರ ನೌಕರರ ಸಂಘದ ಜಿಲ್ಲಾಧ್ಯಕ್ಷ ರುದ್ರಯ್ಯ ಸಾಲಿಮಠ ಮಾತನಾಡಿ, ಅರ್ಚಕರ ವಿವಿಧ ಬೇಡಿಕೆ ಈಡೇರಿಸುವಂತೆ ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.
ರಾಜ್ಯದ ಮುಜಾರಾಯಿ ಇಲಾಖೆ ಹಾಗೂ ಖಾಸಗಿ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು ತುಂಭಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅಲ್ಲದೇ ಸರ್ಕಾರದ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಚಕರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಜಾರಾಯಿ ಇಲಾಖೆ ಹಾಗೂ ಖಾಸಗಿ ದೇವಾಲಯಗಳ ಅರ್ಚಕರಿಗೆ ಸರ್ಕಾರಿ ವೇತನ, ಸವತಿ ಸೌಲಭ್ಯ ನೀಡಬೇಕು. ಕೇಂದ್ರದ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿಂದ ರು. 24 ಸಾವಿರ ವರ್ಷಾಸನವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಅಲ್ಲದೇ, ರಾಜ್ಯ ದೇವಸ್ಥಾನಗಳ ಅರ್ಚಕರಿಗೆ ಡಿ ದರ್ಜೆಯ ನೌಕರರ ವೇತನಕ್ಕಿಂತ ಹೆಚ್ಚಿನ ವೇತನ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ದೇವಸ್ಥಾನದ ಜಾಗೆಯಲ್ಲಿ ಅರ್ಚಕರಿಗೆ ನಿವೇಶನ ಕಟ್ಟಿಕೊಳ್ಳಲು ಅನುಮತಿ ನೀಡುವುದಲ್ಲದೇ, ಸರ್ಕಾರ ನಿವೇಶನ ನಿರ್ಮಾಣಕ್ಕೆ ರು. 5 ಲಕ್ಷ ಸಹಾಯಧನ ನೀಡಬೇಕು. ಹಾವೇರಿ ಜಿಲ್ಲೆಯ ಎಲ್ಲ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಬೇಕು. ಎಂಪಿ ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಗೆ ಸೇರಿಸುವುದು ಇತ್ಯಾದಿ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರು. ಅರ್ಚಕರ, ಆಗಮಿಕರ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುರೇಶ ಕಮ್ಮಾರ, ಸಹ ಕಾರ್ಯದರ್ಶಿ ಶಾಂತವೀರಯ್ಯ ಹಿರೇಮಠ, ಶಿವಲಿಂಗಯ್ಯ ಪೂಜಾರ, ದೊಡ್ಡಪ್ಪ ಪೂಜಾರ, ಮಂಜಪ್ಪ ಪೂಜಾರ, ರಾಘವೇಂದ್ರ ದೇಶಪಾಂಡೆ, ವೀರಭದ್ರಪ್ಪ ಕಮ್ಮಾರ ಸೇರಿದಂತೆ ನೂರಾರು ಅರ್ಚಕರು ಭಾಗವಹಿಸಿದ್ದರು.