ಸಮಾಜ ಗುರುತಿಸುವ ಸಾಧನೆ ಮಾಡಿ
ಹಾವೇರಿ: ತಂದೆ, ತಾಯಿ ಹಾಗೂ ಅಕ್ಷರ ಜ್ಞಾನ ಕಲಿಸಿದ ಗುರುವಿನ ಋಣ ತೀರಿಸಬೇಕಾದರೆ, ಪ್ರತಿಯೊಬ್ಬರೂ ಸಮಾಜ ಗುರುತಿಸುವಂತಹ ಸಾಧನೆ ಮಾಡಬೇಕು ಎಂದು ವಿ.ಡಿ. ದುಂಡಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮತ್ತಿಹಳ್ಳಿಯ ಗ್ರಾಮದೇವಿ ಮಂಟಪದಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗ ಹಾಗೂ ಗ್ರಾಮಸ್ಥರು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹರ ಮುನಿದರೆ ಗುರು ಕಾಯುವನು ಎಂಬ ತತ್ವ ಅನುಸರಿಸಿ ಮಕ್ಕಳು ಗುರುವಿನ ಮಾರ್ಗದಲ್ಲಿ ನಡೆದಾಗ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ. ಸತತ ಅಧ್ಯಯನ, ಕಠಿಣ ಪರಿಶ್ರಮದಿಂದ ಗುರಿ ಸಾಧಿಸಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎನ್.ಎಸ್. ಕಮ್ಮಾರ ಮಾತನಾಡಿ, ಮಗುವಿರುವಾಗ ಪಾಲಕರ ತೋಳಲ್ಲಿ, ಪ್ರಾಥಮಿಕ ಮತ್ತು ಪ್ರೌಢಾವಸ್ಥೆಯಲ್ಲಿ ಗುರುವಿನ ಮಡಿಲಲ್ಲಿ ಹಾಗೂ ದೊಡ್ಡವರಾದ ನಂತರ ಸಮಾಜದ ಒಡಲಲ್ಲಿ ಬೆಳೆಯುವ ಮನಷ್ಯ, ತಾನು ಭೂಮಿ ಮೇಲೆ ಏತಕ್ಕಾಗಿ ಜನಿಸಿದ್ದೇನೆ ಎಂಬ ಪ್ರಶ್ನೆ ಹಾಕಿಕೊಂಡಾಗ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಬಸವರಾಜ ಕೊರಗರ ಮಾತನಾಡಿ, ವಿದ್ಯಾರ್ಥಿಗಳು ಪಾಲಕರ, ಗುರುಗಳ ಹಾಗೂ ಹಿರಿಯರು ತೋರಿದ ಸನ್ಮಾರ್ಗದಲ್ಲಿ ನಡೆದು ಸಮಾಜ ಕೊಂಡಾಡುವಂತ ಸಾಧನೆ ಮಾಡವ ಮೂಲಕ ಕಲಿತ ಶಾಲೆಗೆ, ಗುರುಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು. ವಿ.ಡಿ. ದುಂಡಿ, ಎನ್.ಎಸ್. ಕಮ್ಮಾರ, ಎ.ವಿ. ಇಂಗಳೆ, ಆರ್.ಬಿ.ನಾಯಕ, ಎಫ್.ವಿ. ವೈಕುಂಠೆ, ಎಸ್.ಎಸ್. ಮಠ, ನಾಡಗೌಡ್ರ ಬುಡ್ಡನವರ, ಎಂ.ಸಿ. ಎಲಿ ಸೇರಿದಂತೆ ಮುಂತಾದವರನ್ನು ಅಭಿನಂದಿಸಲಾಯಿತು. ವೀರಭದ್ರಪ್ಪ ಮತ್ತಿಹಳ್ಳಿ, ರುದ್ರಪ್ಪ ಗೂರನವರ, ಡಾ. ಎಸ್.ಎಸ್. ಕಮ್ಮಾರ, ಉಪನ್ಯಾಸಕ ಜಿ.ಬಿ. ಹಾವೇರಿ, ಎಸ್.ಬಿ. ಬಣಕಾರ, ಸೋಮಶೇಖರ ಎಲ್, ಎಚ್.ಟಿ. ಭಜಂತ್ರಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಅರುಣ ಕೊರಗರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಾಗರಾಜ ಕೊರಗರ ಸ್ವಾಗತಿಸಿದರು. ಎಂ.ಎನ್. ಚೌಡಕ್ಕನವರ ನಿರೂಪಿಸಿದರು.