ಚುನಾವಣೆ: ಮತ ಚಲಾಯಿಸಿ
ಹಿರೇಕೆರೂರು: ಮತದಾನ ಪವಿತ್ರವಾಗಿದ್ದು, ತಪ್ಪದೆ ಸೂಕ್ತ, ಸಮರ್ಥ ಅಭ್ಯರ್ಥಿಗೆ ಬರುವ 2014ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಕದಂಬ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರದೀಪ ಕುಲಕರ್ಣಿ ಮತದಾರರಲ್ಲಿ ಮನವಿ ಮಾಡಿದರು.
ಅವರು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ತಾಲೂಕಿನ ಕಡೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಮತದಾನ ಜಾಗೃತಿ ಅಭಿಯಾನದಲ್ಲಿ ಮತದಾರರನ್ನು ಕುರಿತು ಮಾತನಾಡಿದರು. ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಲ್ಲಿ ಮತದಾನದ ಹಕ್ಕು ಅತಿ ಮಹತ್ವ ಪಡೆದಿದೆ. ಅದರನ್ವಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಚುನಾಣೆಯ ದಿನ ಮತಗಟ್ಟೆಗೆ ಸ್ವಯಂ ಪ್ರೇರಣೆಯಿಂದ ಹೋಗಿ ನಿರ್ಭೀತಿಯಿಂದ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶವಿದೆ. ಯಾವುದೇ ಆಶೆ, ಅಮಿಷ, ಕಾಣಿಕೆ, ವರ್ಚಸ್ಸುಗಳಿಗೆ ಮಣಿಯದೆ ಸೂಕ್ತ ಅಭ್ಯರ್ಥಿಗೆ ಮತ ನೀಡಲು ಇರುವ ಸುವರ್ಣ ಅವಕಾಶವನ್ನು ಕಳೆದುಕೊಳ್ಳದಿರಿ. ಸೂಕ್ತ, ಸಮರ್ಥ, ವ್ಯಕ್ತಿಯನ್ನು ಆಯ್ಕೆಮಾಡಿರಿ. ಹಗರಣ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗೆ ಮತ ಚಲಾಯಿಸಬೇಡಿ ಎನ್ನುವ ಘೋಷ ವಾಕ್ಯಗಳೊಂದಿಗೆ ಗ್ರಾಮದಲ್ಲಿ ಸಂಚರಿಸಿ ಕರಪತ್ರ ಹಂಚಿದರು. ಕದಂಬ ಸೇವಾ ಟ್ರಸ್ಟ್ ವತಿಯಿಂದ ಜರುಗಿದ ಮತದಾನ ಅಭಿಯಾನದಲ್ಲಿ ನಾಗರಾಜ ಮಾಯಚಾರಿ, ನರಸಿಂಹಮೂರ್ತಿ ಅದವಾನಿ, ಸುಬ್ರಹ್ಮಣ್ಯ ನಾಡಿಗೇರ, ನಾಗರಿಕರು ಭಾಗವಹಿಸಿದ್ದರು.
--