ಪ್ರತಿಸ್ಪರ್ಧಿಗಳನ್ನು ಹಗುರಾಗಿ ಪರಿಗಣಿಸಬೇಡಿ
ಹಾವೇರಿ: ಯಾವುದೇ ಪಕ್ಷದ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಹಗುರವಾಗಿ ಪರಿಗಣಿಸದೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ನಗರದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಕ್ಷ ಸೂಚಿಸುವ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಎಲ್ಲಾ ಜಿಪಂ ಸದಸ್ಯರು ಪಾಲಿಸಬೇಕು. ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಿದರು ಧೈರ್ಯದಿಂದ ಎದುರಿಸಬೇಕು. ಮೋದಿಯವರ ಪ್ರಭಾವವು ಇಡೀ ದೇಶದಲ್ಲಿ ಇರುವುದರಿಂದ ಅದರ ಉಪಯೋಗವನ್ನು ಪಡೆಯಬೇಕು. ಇಡೀ ದೇಶದಲ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ದೊಡ್ಡ ಪ್ರಮಾಣದಲ್ಲಿ ಜನರು ಪಕ್ಷವನ್ನು ಸೇರಿದ್ದಾರೆ. ಸಮೀಕ್ಷೆಗಳು ಪಕ್ಷದ ಪರವಾಗಿ ಬರುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು. ಎಲ್ಲ ಬೂತ್ಗಳಲ್ಲಿ ಬಿಜೆಪಿಗೆ ಹೆಚ್ಚು ಮತ ಬರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಂದು ಮತಗಟ್ಟೆಯಲ್ಲಿ 8 ರಿಂದ 10 ಪ್ರಮುಖ ಕಾರ್ಯಕರ್ತರನ್ನು ಪಟ್ಟಿ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕು. ಈ ಚುನಾವಣೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಇಡೀ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ಅದರ ಸದುಪಯೋಗ ಪಡೆದು, ಬಿಜೆಪಿ ಗೆಲುವಿಗೆ ಸಹಕರಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಮಾಜಿ ಎಂಎಲ್ಸಿ ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡರ ವೇದಿಕೆಯಲ್ಲಿದ್ದರು. ಬಸವರಾಜ ಹಾದಿಮನಿ, ಮಂಜುನಾಥ ವಾಲಿಕಾರ, ಬಸವರಾಜ ಬೇವಿನಹಕ್ಕಿ, ಸಂತೋಷ ಪಾಟೀಲ, ಸಂಕರಣ್ಣ ಮಾತನವರ, ಪಾರ್ವತಿ ಭೊಗಾವಿ, ವಿರೂಪಾಕ್ಷಪ್ಪ ಬಳ್ಳಾರಿ, ಪದ್ಮನಾಭ ಕುಂದಾಪುರ, ಶಿವಕುಮಾರ ಮುದ್ದೆಪ್ಪನವರ, ವಿರೇಶ್ವರಿ ಸುರಳಿಹಳ್ಳಿ ಇದ್ದರು.