ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರತಿ-ಕಾಮಣ್ಣ ನಗಿಸಿ, ಲಕ್ಷ ಹಣ ಜೇಬಿಗಿಳಿಸಿ

Lingaraj Badiger
Updated On : 15 Mar 2014, 12:24 pm

ರಾಣಿಬೆನ್ನೂರು: ಎಂಥವರನ್ನಾದರೂ ನಗಿಸುವ ಸಾಮರ್ಥ್ಯ ನಿಮಲ್ಲಿದೆಯೇ? ನಗಿಸುವುದರಲ್ಲಿ ನೀವು ಪ್ರವೀಣರೇ? ನಗಿಸುವುದರಲ್ಲಿಯೇ ಪಾಂಡಿತ್ಯ ಪಡೆದಿದ್ದಿರಾ? ಹಾಗಾದರೆ ತಡವೇಕೆ ಬನ್ನಿ. ಹೋಳಿ ಹಬ್ಬದ ನಿಮಿತ್ತ ರಾಣಿಬೆನ್ನೂರು ನಗರದ ದೊಡ್ಡಪೇಟೆಯ ಭೀಮಲಿಂಗೇಶ್ವರ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಮಾ. 16ರಂದು (ಭಾನುವಾರ ) ರಾತ್ರಿ 7 ಗಂಟೆಯಿಂದ 12-30 ರವರೆಗೆ ಕುಳಿತುಕೊಳ್ಳುವ ಕಾಮ-ರತಿ ವೇಷಧಾರಿಗಳನ್ನು ನಗಿಸಿ ರು. 1. 21 ಲಕ್ಷ ಬಹುಮಾನ ಗೆಲ್ಲಿ.
ಹೀಗೆಂದು ಕಾರ್ಯಕ್ರಮ ಸಂಘಟಿಸಿರುವ ಶ್ರೀಶಕ್ತಿ ಯುವಕ ಸಂಘದ ಜಿಬಿಎಸ್‌ಎಸ್ ಕ್ಲಬ್ ಕಾರ್ಯಕರ್ತರು ಪಂಥಾಹ್ವಾನ ನೀಡಿದ್ದಾರೆ. ನಗಿಸುವ ಸಾಮರ್ಥ್ಯ ಇದ್ದವರು ಬಂದು ಕಾಮ-ರತಿ ವೇಷಧಾರಿಗಳನ್ನು ನಗಿಸಿದರೆ ಬಹುಮಾನ ಜೇಬಿಗಿಳಿಸಿಕೊಳ್ಳಬಹುದು.
ಏನಿದು ವಿಶೇಷ?: ಕಳೆದ 56 ವರ್ಷಗಳ ಹಿಂದೆ 1958-59ನೇ ಇಸ್ವಿಯಲ್ಲಿ ನಗರದ ದೊಡ್ಡಪೇಟೆಯ ಪ್ರಮುಖರಾಗಿದ್ದ ದಿ. ವಿರೂಪಾಕ್ಷಪ್ಪ ರೊಡ್ಡನವರ, ಬಸವರಾಜಪ್ಪ ಹರಿಹರ, ದೇವೇಂದ್ರಪ್ಪ ಮೂಡಬಾಗಿಲ ಈರಣ್ಣ ಜಂಬಗಿ ಸೇರಿದಂತೆ ಪ್ರಮುಖರೆಲ್ಲ ಸೇರಿ ಹೋಳಿ ಹಬ್ಬದ ಆಚರಣೆ ನಿಮಿತ್ತ ರತಿ-ಕಾಮರ ಪ್ರತಿಷ್ಠಾಪನೆಗಾಗಿ ಊರಲ್ಲಿ ಚಂದಾ ರೂಪದಲ್ಲಿ ಹಣ ಸಂಗ್ರಹಿಸಿದ್ದರು. ಹಣ ಸಂಗ್ರಹಿಸಿದ್ದ ಪ್ರಮುಖರು ಹಬ್ಬದ ನಿಮಿತ್ತ ಏನಾದರೊಂದು ಹೊಸ ಕಾರ್ಯಕ್ರಮ ಮಾಡೋಣವೆಂದು ಚರ್ಚಿಸುತ್ತಿದ್ದ ಸಮಯದಲ್ಲಿ ಜೀವಂತ ರತಿ-ಕಾಮಣ್ಣರನ್ನು ಕುಳ್ಳಿರಿಸಿ ಸಾರ್ವಜನಿಕರಿಗೆ ಮನರಂಜನೆ ನೀಡೋಣವೆಂದು ತೆಗೆದುಕೊಂಡ ನಿರ್ಧಾರವು ಇಂದಿಗೂ ಮುಂದುವರಿದಿದೆ. ಪುರುಷರೇ ರತಿ-ಕಾಮಣ್ಣ ಪಾತ್ರಧಾರಿಗಳಾಗಿ ಕುಳಿತುಕೊಳ್ಳಲು ಹಾಗೂ ರತಿ-ಕಾಮಣ್ಣರನ್ನು ನಗಿಸಿದರೆ ಬಹುಮಾನ ನೀಡುವುದಾಗಿ 58 ವರ್ಷಗಳ ಹಿಂದೆ ನಮ್ಮ ಹಿರಿಯರು ನಿರ್ಧರಿಸಿ ಪ್ರಾರಂಭಿಸಿರುವ ಜೀವಂತ ರತಿ-ಕಾಮಣ್ಣರ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ನಾವು ಮುಂದುವರಿಸಿಕೊಂಡು ಬಂದಿದ್ದು, ಮಾ. 16ರಂದು ರಾತ್ರಿ ಪ್ರತಿಷ್ಠಾಪನೆಗೊಳ್ಳುವ ಜೀವಂತ ರತಿ-ಕಾಮಣ್ಣರನ್ನು ನಗಿಸಿದವರಿಗೆ ರು. 1.21 ಲಕ್ಷ ಬಹುಮಾನವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಕಾರ್ಯಕ್ರಮ ಸಂಘಟಿಕರಾದ ಶ್ರೀಶಕ್ತಿ ಯುವಕ ಸಂಘ ಹಾಗೂ ಜಗಜ್ಯೋತಿ ಬಸವೇಶ್ವರ ಕ್ರಿಕೆಟ್ ಕಬ್ಲ್ ಅಧ್ಯಕ್ಷ ಶಿವರಾಜ ಬ್ಯಾಡಗಿ, ಚಂದ್ರಶೇಖರ ರೋಡ್ಡನವರ, ಮಲ್ಲಿಕಾರ್ಜುನ ಪೂಜಾರ, ಬಸವರಾಜ ಮಜ್ಜಗಿ ತಿಳಿಸುತ್ತಾರೆ.
ಯಾರೀ ರತಿಕಾಮಣ್ಣ?: ಕಳೆದ 56 ವರ್ಷಗಳಿಂದ ನಡೆದು ಬಂದಿರುವ ಈ ಆಚರಣೆಯಲ್ಲಿ ರತಿಕಾಮಣ್ಣ ವೇಷದಲ್ಲಿ ಒಂದೇ ಜೋಡಿ ಕುಳಿತಿಲ್ಲ. 1958ರ ಪ್ರಾರಂಭದಲ್ಲಿ ವಿರೂಪಾಕ್ಷಪ್ಪ ರೊಡ್ಡನವರ, ಲಕ್ಷ್ಮಣ ತಳಿಕೊಪ್ಪಿ ರತಿ ಕಾಮಣ್ಣರ ವೇಷಧಾರಿಗಳಾಗಿ 3 ವರ್ಷಗಳ ಕಾಲ ಮುಂದುವರಿದರು. ಮುಂದೆ ಕೊಟ್ರಪ್ಪ ಕಾಸಳ (ಕಾಮ), ಸುಭಾಸ ಗಲಜೇರಿ (ರತಿ), ಯಲ್ಲಪ್ಪ ರ್ಯಾವಳದ (ಕಾಮ), ವಾಗೀಶ ಜಂಬಗಿ, ಶಂಕರೆಪ್ಪ ಮಜ್ಜಗಿ ಮುಂತಾದವರು ಕಾಮ-ರತಿ ವೇಷದಲ್ಲಿ ಮೆರೆದಿದ್ದಾರೆ. ಇತ್ತಿಚಿನ ದಿನಗಳಲ್ಲಿ 18 ವರ್ಷಗಳಿಂದ ಗದ್ದಗೇಶ ಸಣ್ಣತಮ್ಮಪ್ಪ ರೊಡ್ಡನವರ ಕಾಮನ ವೇಷಧಾರಿಯಾಗಿ, 19 ವರ್ಷಗಳಿಂದ ಕುಮಾರ ಹಡಪದ ರತಿ ವೇಷಧಾರಿಯಾಗಿ ಪ್ರದರ್ಶನ ನೀಡುತ್ತಾ ಕಾರ್ಯಕ್ರಮಕ್ಕೆ ರಂಗು ನೀಡುತ್ತಿದ್ದಾರೆ.
ನಗೆಪಾಟಲಿಗೀಡಾಗಿದ್ದಾರೆ: 56 ವರ್ಷಗಳ ಇತಿಹಾಸ ಹೊಂದಿರುವ ಜೀವಂತ ರತಿ-ಕಾಮಣ್ಣರ ನಗಿಸುವ ಪ್ರದರ್ಶನವನ್ನು ಬೆಂಗಳೂರಿನ ಜನರಿಗೆ ಪರಿಚಯಿಸುವುದಕ್ಕಾಗಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ದಿ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿ 2013ರ ಆಗಸ್ಟ್ 10 ರಂದು ಏರ್ಪಡಿಸಿದ್ದ ಉತ್ತರ ಕರ್ನಾಟಕ ಉತ್ಸವದಲ್ಲಿ ಕಾಮನ ವೇಷದಲ್ಲಿ ಗದ್ದಿಗೆಪ್ಪ ಸಣ್ಣತಮ್ಮಪ್ಪ ರೊಡ್ಡನವರ, ರತಿ ವೇಷದಲ್ಲಿ ಕುಮಾರ ಹಡಪದ ರತಿ-ಕಾಮಣ್ಣರಾಗಿ ಕುಳಿತು ಪ್ರದರ್ಶನ ನೀಡಿದ್ದರು.
ಅವರನ್ನು ನಗಿಸಲು ಹೋದವರಲ್ಲಿ ಪ್ರಮುಖರೆನ್ನಿಸಿಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ವಿರಶೈವ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ದಿಡಗೂರು ಸೇರಿದಂತೆ ಅನೇಕರು ತಾವೇ ನಗೆಪಾಟಲಿಗೀಡಾಗಿದ್ದಾರೆಂದು ಕಾರ್ಯಕ್ರಮ ಸಂಘಟಕರಾದ ಲಕ್ಷ್ಮಣ ಕಳಕೊಪ್ಪ, ಸುಭಾಸ ಚನ್ನಪ್ಪನವರ, ಕೊಟ್ರಪ್ಪ ಕಾಸಲ್, ಯಲ್ಲಪ್ಪ ರ್ಯಾವಳದ ಹೆಮ್ಮೆಯಿಂದ ಹೇಳುತ್ತಾರೆ.
- ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement