ಕಾಂಗ್ರೆಸ್ ಜನಪರ ಯೋಜನೆ ಜನತೆಗೆ ತಿಳಿಸಿ: ಶಾಸಕ ಲಮಾಣಿ
ಹಾವೇರಿ: ಕೇಂದ್ರ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ದೇಶ ಮೆಚ್ಚುವಂತೆ ಜನಪರ ಕಾರ್ಯ ಮಾಡಿದೆ. ಕಾರ್ಯಕರ್ತರು ಮತದಾರರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಯೋಜನೆಗಳನ್ನು ಪರಿಚಯಿಸಬೇಕೆಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಶನಿವಾರ ಭಾರತ್ ನಿರ್ಮಾಣ ಕಾರ್ಯಕ್ರಮದಡಿಯಲ್ಲಿ ತಾಲೂಕು ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ನೀಡಿದ ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆಯಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈಗ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. 128 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿರುವ ಪಕ್ಷವಾಗಿದೆ. ದೇಶದ ಅಭಿವೃದ್ಧಿ, ಬಡತನ ನಿರ್ಮೂಲನೆ, ನೀರಾವರಿ, ಕೃಷಿ, ತೋಟಗಾರಿಕೆ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಪಕ್ಷದ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಯಾರನ್ನು ಅಭ್ಯರ್ಥಿಯಂದು ಘೋಷಣೆ ಮಾಡಿದರೂ ಅವರ ಗೆಲುವಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಕರೆ ನೀಡಿದ ಅವರು, ಸಾಮಾಜಿಕ ನ್ಯಾಯಕ್ಕಾಗಿ ಎಲ್ಲ ಸಮುದಾಯಗಳನ್ನು ಅಭಿವೃದ್ಧಿಗೊಳಿಸುವುದು ಕಾಂಗ್ರೆಸ್ ಸರ್ಕಾರದ ಯೋಜನೆಗಳಾಗಿವೆ. ಈ ಯೋಜನೆಗಳನ್ನು ಜನಸಾಮಾನ್ಯನವರೆಗೂ ತಲುಪಿಸಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಯೋಜನೆಗಳನ್ನು ನೀಡಿವೆ. ಆದರೆ, ಪ್ರಚಾರದ ಕೊರತೆಯಿಂದ ಈ ಯೋಜನೆಗಳು ಜನತೆಗೆ ಮುಟ್ಟಿಲ್ಲ. ಈಗ ಪಾದಯಾತ್ರೆ ಮೂಲಕ ಯೋಜನೆಗಳ ಪರಿಚಯ ಮಾಡಿಸಲಾಗುತ್ತಿದೆ. ಉದ್ಯೋಗ ಸೃಷ್ಟಿ, ಮಾಹಿತಿ ಹಕ್ಕು, ಆರ್‌ಟಿಇ, ಪಿಎಂಜಿಎಸ್‌ವೈ, ವಸತಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೊಡುಗೆಗಳಾಗಿವೆ ಎಂದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್. ಬಸೇಗೆಣ್ಣಿ ಮಾತನಾಡಿ, ಆಹಾರ ಭದ್ರತೆ, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ಶೂನ್ಯ ಬಡ್ಡಿ ದರದ ಸಾಲ ಯೋಜನೆ ಸೌಲಭ್ಯಗಳು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಾಗಿವೆ. ಈ ಪಾದಯಾತ್ರೆಯ ಮೂಲಕ ಮತದಾರರಿಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಅರಿವು ಮೂಡಿಸಲಾಗುತ್ತಿದೆ ಎಂದರು. ಶಹರ ಕಾಂಗ್ರೆಸ್ ಅಧ್ಯಕ್ಷ ಪಿ.ಎಸ್. ಬಿಷ್ಟನಗೌಡ್ರ, ನಗರಸಭಾ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ನಗರಸಭಾ ಸದಸ್ಯರಾದ ರಮೇಶ ಕಡಕೋಳ, ಹನುಮಂತಪ್ಪ ಶರಸೂರಿ, ಮುಖಂಡರಾದ ಹನುಮಂತಗೌಡ ಉಳ್ಳಾಗಡ್ಡಿ, ಆನಂದಪ್ಪ ಅಕ್ಕೂರ, ಸಿ.ಬಿ. ಕುರವತ್ತಿಗೌಡ್ರ, ನಗರಾಜ ಯರೆಮನಿ, ಉಳವೆಪ್ಪ ಹಲಗಣ್ಣನವರ, ಈರಪ್ಪ ಲಮಾಣಿ, ಬಸವರಾಜ ಬಳ್ಳಾರಿ, ಶಿವಕುಮಾರ ತಾವರಗಿ, ಶಾಂತಾಬಾಯಿ ಶಿರೂರ, ಶಬಿನಾಬಿ ಅಗಡಿ, ಶ್ರೀಧರ ದೊಡ್ಡಮನಿ, ಸೋಮನಗೌಡ ಪಾಟೀಲ, ಅಶೋಕ ಹರನಗಿರಿ, ಹನುಮಂತಪ್ಪ ಅಂಗರಗಟ್ಟಿ, ಶಿವಬಸಪ್ಪ ಹಲಗಣ್ಣನವರ, ವೀರಬಸಪ್ಪ ಅರಳಿ, ಹೊನ್ನಪ್ಪ ದೊಡ್ಡಮನಿ, ಶಿವಪುತ್ರಪ್ಪ ಹುಲಗೂರ ಇತರರು ಇದ್ದರು. ಕನವಳ್ಳಿ ಗ್ರಾಮದಿಂದ ಶನಿವಾರ ಭಾರತ್ ನಿರ್ಮಾಣ್ ಕಾರ್ಯಕ್ರಮದಡಿಯಲ್ಲಿ ತಾಲೂಕು ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪಾದಯಾತ್ರೆಯು ಕನವಳ್ಳಿ, ಹನುಮನಹಳ್ಳಿ, ಕಾಟೇನಹಳ್ಳಿ ಮಾರ್ಗವಾಗಿ ತೋಟದಯಲ್ಲಾಪುರದ ಮೂಲಕ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಒಟ್ಟು 16 ಕೀ.ಮಿ. ಕ್ರಮಿಸಿ ಅಂತ್ಯಗೊಂಡಿತು.