ಬ್ಯಾಡಗಿ ಕ್ಷೇತ್ರದ 26 ಗ್ರಾಮಗಳ ಬಿಜೆಪಿ ಕಾರ್ಯಕರ್ತರ ಸಭೆ
ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಾವೇರಿ ತಾಲೂಕಿನ 26 ಗ್ರಾಮಗಳ ಪ್ರಮುಖ ಬಿಜೆಪಿ ಕಾರ್ಯಕರ್ತರ ಸಭೆ ನಗರದ ಅಶೋಕ ಹೋಟೆಲ್ನಲ್ಲಿ ಬಿಜೆಪಿ ಜಿಲ್ಲಾ ಸಮಿತಿಯಿಂದ ನಡೆಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಕಳೆದ 60 ವರ್ಷಗಳಿಂದಲೂ ಈ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ಈ ದೇಶದ ಆರ್ಥಿಕ ಪರಿಸ್ಥಿಯನ್ನು ಅತ್ಯಂತ ಕೆಳಮಟ್ಟಕ್ಕೆ ಒಯ್ದು ಜನಸಾಮಾನ್ಯರ ಬದುಕನ್ನು ಹದಗೆಡಿಸಿದೆ. ಈ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ದೇಶದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಹಗರಣಗಳು ಕೇಂದ್ರದಲ್ಲಿ ಆಡಳಿತ ನಡೆಸಿರುವ ಯುಪಿಎ ಸರ್ಕಾರಕ್ಕೆ ಸಲ್ಲುತ್ತದೆ. 2ಜಿ ಸ್ಪೆಕ್ಟ್ರಂ ಹಗರಣದಂಥ ಸಾವಿರಾರು ಕೋಟಿ ರು. ಹಗರಣ ಈ ದೇಶದಲ್ಲಿ ನಡೆದಿದ್ದು ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಈ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣದಲ್ಲಿ ಪ್ರಮುಖನಾಗಿದ್ದಾನೆ. ದೇಶದಲ್ಲಿ ಆಂತರಿಕ ಸುರಕ್ಷತೆ ಹದಗೆಟ್ಟಿದೆ. ಪ್ರತಿನಿತ್ಯ ದೇಶದ ಸೈನಿಕರ ಮೇಲೆ ದಾಳಿಗಳು ನಡೆಯುತ್ತಲೆ ಇದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕರೆ ನಿಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಪಕ್ಷದ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವು ಸೂಚಿಸುವ ಎಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡಬೇಕು. ಬೂತ್ಮಟ್ಟದ ಕಾರ್ಯಕರ್ತರನ್ನು ಚುನಾವಣಾ ಕಾರ್ಯದಲ್ಲಿ ತೊಡಗಿಸಿ ಮನೆ ಮನೆಗೆ ಬಿಜೆಪಿ ಸರ್ಕಾರದ ಸಾಧನೆ ಸಂದೇಶವನ್ನು ರವಾನಿಸಬೇಕೆಂದು ವಿನಂತಿಸಿದರು. ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಭ್ರಷ್ಟಾಚಾರದ ಹಗರಣಗಳೇ ಕಾಂಗ್ರೆಸ್ ಸೋಲಿಗೆ ಕಾರಣವಾಗಲಿದೆ ಎಂದು ಹೇಳಿದರು.