21ರಂದು ಕಾರ್ಮಿಕರ ಪ್ರತಿಭಟನೆ
ರಾಣಿಬೆನ್ನೂರು: ತಾಲೂಕಿನ ತರೆದಹಳ್ಳಿ ಗ್ರಾಮದ ಹತ್ತಿರದಲ್ಲಿರುವ ವೆಂಕಟೇಶ್ವರ ಹ್ಯಾಚರೀಸ್ ಚಿಕನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾ. 21ರಿಂದ ಕಾರ್ಖಾನೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದಾಗಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂ. ದೊಣ್ಣೆಪ್ಪ ಜಿ. ಸೊಟ್ಟಮ್ಮನವರ ತಿಳಿಸಿದ್ದಾರೆ. 3 ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಕಾರ್ಖಾನೆಯಲ್ಲಿನ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವುದಕ್ಕಾಗಿ ಗುತ್ತಿಗೆದಾರರಿಂದ ಕಾರ್ಮಿಕರನ್ನು ಪಡೆದಿರುವ ಕಂಪನಿಯು ತನ್ನ ನಂಬುಗೆಗೆ ಬದ್ಧರಾಗಿ ದುಡಿಯುತ್ತಿರುವ ಕಾರ್ಮಿಕರನ್ನು ಕೇಂದ್ರ ಮತ್ತು ರಾಜ್ಯ ಕಾರ್ಮಿಕ ಇಲಾಖೆಯ ಕಾನೂನುಗಳ ಪ್ರಕಾರ ಇವರೆಲ್ಲ ಗುತ್ತಿಗೆ ಕಾರ್ಮಿಕರಲ್ಲ, ನಮ್ಮ ಕಂಪನಿಯ ಕಾರ್ಮಿಕರೆಂದು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತಹ ಯಾವುದೇ ಸೌಲಭ್ಯ ನೀಡಲು ಮುಂದಾಗಿಲ್ಲ. ಕಾರ್ಮಿಕರಿಗೆ ಏನಾದರೂ ಅವಘಡ ಸಂಭವಿಸಿದಲ್ಲಿ ಅವರ ಕುಟುಂಬ ತೊಂದರಿಗೆ ಸಿಲುಕತ್ತದೆ. ಇದರಿಂದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.