5 ಚೆಕ್ಡ್ಯಾಂ ನಿರ್ಮಾಣ: ಕುಡುಪಲಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 18
2020ರ ವೇಳೆಗೆ ಪಟ್ಟಣದ ಜನಸಂಖ್ಯೆ 50 ಸಾವಿರ ತಲುಪಲಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದಮಲ್ಲೇಶ್ವರ ಗುಡ್ಡದ ಹಿಂಭಾಗದಲ್ಲಿ 1 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ 5 ಚೆಕ್ಡ್ಯಾಮ್ಗಳನ್ನು ನಿರ್ಮಿಸುವುದಾಗಿ ಜಲಾನಯನ ಅಭಿವೃದ್ಧಿ ಅಧಿಕಾರಿ ಕುಡುಪಲಿ ತಿಳಿಸಿದರು.
ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಸಂಗ್ರಹಿಸುತ್ತಿದ್ದ ಕೆರೆಗಳನ್ನು ಬೇರೆ ಉದ್ದೇಶಗಳಿಗೆ ಮುಚ್ಚಿ ಸಾರ್ವಜನಿಕ ವಲಯದಲ್ಲಿರುವ ನಾವೆಲ್ಲರೂ ಸಾಮೂಹಿಕ ತಪ್ಪು ಮಾಡಿದ್ದೇವೆ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ನೀರಿಗಾಗಿ ಸಂಘರ್ಷಗಳು ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನೂ ಕಾಲ ಮಿಂಚಿಲ್ಲ. ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ತೋರುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದರು.
ಸದರಿ ಸ್ಥಳಗಳಲ್ಲಿ ಚೆಕ್ಡ್ಯಾಮ್ಗಳನ್ನು ನಿರ್ಮಿಸುವುದರಿಂದ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಅಲ್ಲದೇ ಕೃಷಿಕರ ಜಾನುವಾರುಗಳಿಗೆ ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಇನ್ನಿತರ ವನ್ಯಜೀವಿ ಸಂಕುಲಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ತಹಸೀಲ್ದಾರ್ ಶಿವಶಂಕರ ನಾಯಕ್ ಸೂಚನೆ ಮೆರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನಾಳೆಯಿಂದಲೇ 2 ಚೆಕ್ ಡ್ಯಾಮ್ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕೆರೆಗಳ ನಿರ್ಮಾಣಕ್ಕೆ ಮುಂದಾಗಿರುವ ತಾಲೂಕಾಡಳಿತ ಕ್ರಮ ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಹೊಸಕೆರೆಗಳ ನಿರ್ಮಾಣ ಹಾಗೂ ಹಾಲಿ ಇರುವಂತಹ ಕೆರೆಗಳನ್ನು ತುಂಬಿಸುವ ಕುರಿತು ಸರ್ಕಾರದ ಗಮನ ಸೆಳೆಯಲಾಗಿದ್ದು, ತಗ್ಗು ಪ್ರದೇಶಗಳಲ್ಲಿ ಕೆರೆಗಳನ್ನು ನಿರ್ಮಿಸುವಂತೆ ಒತ್ತಡ ತರುವುದಾಗಿ ತಿಳಿಸಿದರು.
ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಸರ್ಕಾರಿ ಗೋಮಾಳ ಭೂಮಿ ಮೀಸಲಿದ್ದರೂ ಈಗಾಗಲೇ ಕೆಲ ಪ್ರದೇಶಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನು ಮುಂದೆ ಬೇರೆ ಉದ್ದೇಶಗಳಿಗೆ ಭೂಮಿ ಮಂಜೂರು ಮಾಡಿದಲ್ಲಿ ರೈತ ಸಂಘವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು. ಜಯಣ್ಣ ಭೋವಿ ಮಾತನಾಡಿ, ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಗೋಮಾಳ ಪ್ರದೇಶ ಮೀಸಲಿದೆ ಹೀಗಿದ್ದರೂ ಸಹ ರೈತರ ಕಣ್ತಪ್ಪಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ರೈತನ ಅಳಿವು-ಉಳಿವು ಪ್ರಶ್ನೆಯಾಗಿದ್ದು, ಗೋಮಾಳವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಗಳಿಗೆ ಕೊಡಲು ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಗಿರೀಶ್ ಕೊಪ್ಪದ, ರೇವಣೆಪ್ಪ ಮೋಟೆಬೆನ್ನೂರು, ಮಲಕಪ್ಪ ಹಾದರಗೇರಿ, ಚಿಕ್ಕಪ್ಪ ಛತ್ರದ ಇನ್ನಿತರರು ಉಪಸ್ಥಿತರಿದ್ದರು.