ಎಲೆಕೋಸಿಗೆ ಬೆಲೆಯಿಲ್ಲ, ಹೊಲದಲ್ಲೇ ಬೆಳೆ ನಾಶ!
-ಗಂಗಾಧರ ಹಲಗೇರಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ. 18
ಮುಂಗಾರು ಹಂಗಾಮಿನಲ್ಲಿ ಕಳಪೆ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿ ಕೈ ಸುಟ್ಟಕೊಂಡ ರೈತರು, ಈಗ ಎಲೆಕೋಸು ಫಸಲು ಚೆನ್ನಾಗಿದ್ದರೂ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ದರ ಕುಸಿತದಿಂದ ತೀವ್ರ ಕಂಗಾಲಾಗಿರುವ ಅನ್ನದಾತರು, ಹೊಲದಲ್ಲೇ ಬೆಳೆದು ನಿಂತ ಎಲೆಕೋಸನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿದ್ದಾರೆ.
ತರಕಾರಿ ಬೆಳೆಗಳಾದ ಎಲೆಕೋಸು, ಹೂಕೋಸು, ಬಿಟ್‌ರೂಟ್ ಹಾಗೂ ಮುಳ್ಳುಗಾಯಿ ಬೆಳೆದಿರುವ ರೈತರು, ಸ್ವಾವಲಂಬಿ ಜೀವನ ನಡೆಸುವ ಕನಸು ಈಗ ಭಗ್ನವಾಗಿದೆ. ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಅದು ಸೊಂಪಾಗಿ ಬೆಳೆದಿದೆ. ಆದರೆ, ದರ ಬರೆ ಎಳೆದಿದೆ. ಕೊಯ್ಲು ಮಾಡಿ, ಮಾರುಕಟ್ಟೆಗೆ ತಂದರೆ ಬೆಲೆಯೇ ಇಲ್ಲ. ವ್ಯಾಪಾರಿಗಳು ಕೇಳುವ ಬೆಲೆಗೆ ಮಾರಿದರೆ, ಖರ್ಚೂ ಹುಟ್ಟದು. ಹೀಗಾಗಿ, ಇಂಗಳಗೊಂದಿ ಗ್ರಾಮದ ರೈತರಿಗೆ ಆಘಾತವಾಗಿದೆ.
ಗ್ರಾಮದಲ್ಲಿ ಎಲೆಕೋಸು ಬೆಳೆದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಳೆ ಚೆನ್ನಾಗಿದ್ದರೇನು, ನಮ್ಮ ಹಣೆಬರಹವೇ ಸರಿಯಾಗಿಲ್ಲ ಎಂದು ಗೋಳಾಡುತ್ತಿದ್ದಾರೆ. ಬೆಳೆ ಬೆಳೆಯಲು ಎಕರೆಗೆ 25 ಪ್ಯಾಕೆಟ್ ಬಿತ್ತನೆ ಬೀಜ ಖರೀದಿಸಿದ್ದೇವೆ. ಪ್ರತಿ ಎಕರೆಗೂ ರು. 30-35 ಸಾವಿರ ಖರ್ಚು ಮಾಡಿದ್ದೇವೆ. ಈಗ ನೋಡಿದರೆ, ಬೆಲೆಯೇ ಇಲ್ಲ. ಉತ್ತಮ ದರ ಸಿಕ್ಕಿದ್ದರೆ ಎಕರೆಗೆ ರು. 2 ಲಕ್ಷ ಲಾಭ ಬರುತ್ತಿತ್ತು. ಈಗ ವಾಹನದ ಖರ್ಚಿಗೂ ಸಾಲದಷ್ಟು ಕಡಿಮೆ ದರ ಸಿಗುತ್ತಿದೆ. ನಮ್ಮ ನಿರೀಕ್ಷೆ ಸುಳ್ಳಾಗಿದೆ. ಏನು ಮಾಡೂದ್ರಿ? ಮುಂದಿನ ಬೆಳೆಗೆ ಕಸವಾಗಿ ಗೊಬ್ಬರ ಆಗತೈತಿ ಅಂತ ಟ್ರ್ಯಾಕ್ಟರ್‌ನಿಂದ ರೂಟರ್ ಹೊಡೆಸಾಕ ಹತ್ತೀವ್ರೀ.. ಎಂದು ಪ್ರಗತಿಪರ ರೈತರಾದ ಶಿವನಗೌಡ ಹಲಗೇರಿ, ಜಗದೀಶ ಪುಟ್ಟಳ್ಳವರ ತಮ್ಮ ಅಳಲು ತೋಡಿಕೊಂಡರು. ಸರ್ಕಾರ ಇಂಥವಕ್ಕೆ ಎಲ್ಲಿ ಪರಿಹಾರ ನೀಡತೈತ್ರಿ? ಮುಂದಿನ ಬೆಳೆ ಬೆಳೆಯುವುದಕ್ಕೆ ನೆಲ ಹದಗೊಳಿಸಿದಾಂಗ ಹಾಗೂ ಗೊಬ್ಬರ ಹಾಕಿದಾಂಗ ಆಗತೈತಿ ಅಂತ ರೂಟರ್ ಹೊಡ್ಸಾಕತ್ತಿವ್ರೀ... ಎನ್ನುತ್ತಾರೆ ರೈತ ದೇವನಗೌಡ ನಾಗಪ್ಪನವರ. ಗ್ರಾಮದ ರೈತರಾದ ಶಿವನಗೌಡ ಹಲಗೇರಿ, ಬೂದೇಶ ಚಪ್ಪರದಳ್ಳಿ, ಜಗದೀಶ ಪುಟ್ಟಳ್ಳವರ, ತಲಾ ಎರುಡು ಎಕರೆ ಹಾಗೂ ಗಣೇಶ ಹೊಸಮನಿ, ದಯಾನಂದ ಹಲಗೇರಿ, ಬೂದಪ್ಪ ಮಲ್ಲಣ್ಣನವರ, ಮಂಜಪ್ಪ ಗಡಾದ, ಸಿದ್ದಪ್ಪ ಯಡಚಿ, ಹಂಪೇಶ ಗುಡಿಮನಿ, ಬಸವರಾಜ ಸುತ್ತಕೋಟಿ, ದೇವನಗೌಡ ನಾಗಪ್ಪನವರ, ಬೂದೆಪ್ಪ ಗಿಡ್ಡಪ್ಪನವರ, ಬಸವರಾಜಪ್ಪ ಹೊಗೆಸೊಪ್ಪಿನವರ ಒಂದೊಂದು ಎಕರೆಯಲ್ಲಿ ಎಲೆಕೋಸು ಬೆಳೆದಿದ್ದಾರೆ. ಈಗ ಅದನ್ನು ಕಟಾವು ಮಾಡದೆ, ಟ್ರ್ಯಾಕ್ಟರ್‌ನಿಂದ ರೂಟರ್ ಹೊಡೆಸಿ, ನಾಶ ಮಾಡಿಸಿದ್ದಾರೆ. ಚುನಾವಣೆ ಗಡಿಬಿಡಿಯಲ್ಲಿರುವ ಸರ್ಕಾರ ಈ ರೈತರ ಕಣ್ಣೀರು ಒರೆಸುವುದೇ?
--