ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಗ್ಗಾಂವಿಯಲ್ಲಿ ಸಂಚಾರಿ ನಿಯಮಕ್ಕಿಲ್ಲ ಬೆಲೆ!

Lingaraj Badiger
Updated On : 19 Mar 2014, 12:28 pm

- ಬಸವರಾಜ ಹಿರೇಮಠ
ಶಿಗ್ಗಾಂವಿ:  ನಿತ್ಯ ಪಟ್ಟಣದಲ್ಲಿ ಸಂಚರಿಸುವ ವಾಹನಗಳಿಗೆ ರಸ್ತೆ ನಿಯಮಗಳೇ ಗೊತ್ತಿಲ್ಲ. ಎಲ್ಲಿ ನೋಡಿದರೂ ರಸ್ತೆ ನಿಯಮ ಉಲ್ಲಂಘಿಸಿಯೇ ಸಂಚರಿಸುವ ವಾಹನಗಳ ಅಬ್ಬರಕ್ಕೆ ಪಾದಚಾರಿಗಳು ತತ್ತರಗೊಂಡಿದ್ದಾರೆ.
ಜನನಿಬಿಡ ಪುಟ್‌ಪಾತ್ ಅಕ್ರಮಿಸುವ ಬೈಕ್‌ಗಳು, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ಪೊಲೀಸರು.
ಹೌದು, ವಿವಿಧ ದಾರ್ಶನಿಕರು ನಡೆದಾಡಿದ ಶಿಗ್ಗಾಂವಿಯಲ್ಲಿ ಈಗ ಜನಸಾಮಾನ್ಯರು ಭಯದಲ್ಲೇ ನಡೆದಾಡುವಂತಾಗಿದೆ. ರಸ್ತೆ ನಿಯಮ ಉಲ್ಲಂಘಿಸಿ, ಬೇಕಾ ಬಿಟ್ಟಿಯಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕುವ ಧೈರ್ಯ ಮಾಡದ ಸ್ಥಳೀಯ ಪೊಲೀಸರು, ಅಡ್ಡಾದಿಡ್ಡಿಯಾಗಿ ಸಂಚರಿಸುವ ವಾಹನಗಳಿಂದ ಆಗಾಗ ನಡೆಯವ ಅಪಘಾತಗಳನ್ನು ರಾಜಿ ಮೂಲಕ ಬಗೆಹರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.
ಮೊದಲೇ ಇಕ್ಕಟ್ಟಿನ ಸ್ಥಿತಿಯಲ್ಲಿರುವ ರಸ್ತೆಗಳ ಮೇಲೆ ನಿತ್ಯ ಪಾದಚಾರಿಗಳು ಓಡಾಡುವುದು ಕಷ್ಟಕರವಾಗಿದೆ. ವ್ಯಾಪಾರ ವಹಿವಾಟಕ್ಕೆ ನಿತ್ಯ ಶಿಗ್ಗಾಂವಿಗೆ ಬರುವ ಸಾವಿರಾರು ಜನರು ತೊಂದರೆ ಅನುಭವಿಸುವಂತಾಗಿದೆ.
ಪ್ರಮುಖ ರಸ್ತೆಯಾಗಿರುವ ರಾಜಶ್ರೀ ಚಿತ್ರಮಂದಿರದಿಂದ ಶ್ರೀನಿವಾಸ ಚಿತ್ರ ಮಂದಿರದ ರಸ್ತೆ ಅಕ್ಕಪಕ್ಕ ಪುಟ್‌ಪಾತ್‌ನ್ನು ಬೈಕ್‌ಗಳು ಅಕ್ರಮಿಸಿಕೊಳ್ಳುತ್ತಿವೆ. ರಸ್ತೆ ಮೇಲೆ ಓಡಾಡುವ ಪಾದಚಾರಿಗಳು ತತ್ತರಿಸಿ ಹೋಗುತ್ತಿದ್ದಾರೆ.
ರಸ್ತೆ ಆಕ್ರಮಣ: ಪಟ್ಟಣದೆಲ್ಲೆಡೆ ನೋಡಿದರೂ ಇಕ್ಕಟ್ಟಿನ ರಸ್ತೆಗಳನ್ನೇ ಕೆಲವರು ಅಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಅಲ್ಲದೆ ಪಾದಚಾರಿಗಳನ್ನು ಗುರಾಯಿಸುವುದು, ಅವರ ಮೇಲೆ ಹರಿಹಾಯುವುದು ನಿತ್ಯ ಕಾಣುವ ದೃಶ್ಯ. ಆಸ್ಪತ್ರೆ, ಬ್ಯಾಂಕ್, ಬಸ್ ನಿಲ್ದಾಣಕ್ಕೆ ಬಂದು ಹೋಗುವುದಕ್ಕೂ ವಾಹನಗಳ ಸಂಚಾರದ ಅವ್ಯವಸ್ಥೆಗೆ ಪಾದಚಾರಿಗಳು ಭಯ ಭೀತರಾಗಿದ್ದಾರೆ. ನಿಂತಿರುವ ವಾಹನಗಳನ್ನು ದಾಟಿ ಪ್ರವೇಶ ಮಾಡಲು ಬೆವರಿಳಿಸಿಕೊಳ್ಳುವಂತಹ ಸ್ಥಿತಿ ಇಲ್ಲಿದೆ. ಅಲ್ಲದೆ ತುರ್ತು ಚಿಕಿತ್ಸೆಗಾಗಿ ಬೇರೆಡೆ ಆಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಸಾಗಿಸಲು ಮತ್ತು ಹೊರಗಡೆಯಿಂದ 108ನಲ್ಲಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಸಂಬಂಧಿಸಿದ ವಾರ್ಡ್‌ಗೆ ಸಾಗಿಸಲೂ ಆಸ್ಪತ್ರೆಯ ಸಿಬ್ಬಂದಿ ಹರಸಾಹಸ ಪಡುವಂತಹ ಸ್ಥಿತಿ. ಇದೇ ರಸ್ತೆ ಮೇಲೆ ಓಡಾಡುವ ಸಾಕಷ್ಟು
ಪಾದಚಾರಿಗಳು ಬೈಕ್, ವಾಹನಗಳಿಂದ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಆದರೂ ಪೊಲೀಸ್ ಠಾಣೆಯಲ್ಲಿ ಮಾತ್ರ ಅಪಘಾತ ನಡೆದ ಕುರಿತು ದೂರುಗಳ ಸಂಖ್ಯೆ ಕಡಿಮೆ. ಅಪಘಾತ ನಡೆದ ಕ್ಷಣಾರ್ಧದಲ್ಲಿ ರಾಜಿ ಪಂಚಾಯಿತಿ ಮಾಡಿ ಪ್ರಕರಣವನ್ನು ಸ್ಥಳದಲ್ಲೇ ಬಗೆಹರಿಸುವ ಚಾಣಾಕ್ಷ್ಯ ಪೊಲೀಸರು ಇಲ್ಲಿದ್ದಾರೆ.
ಆದೇಶಕ್ಕೆ ಬೆಲೆಯಿಲ್ಲ: ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಎನ್. ಶಶಿಕುಮಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ಕೈಗೊಂಡಿದ್ದರು. ಅತಿ ಕಿರಿದಾಗಿರುವ ಪಿಎಲ್‌ಡಿ ಬ್ಯಾಂಕ್ ರಸ್ತೆ ಮೇಲೆ ಸಣ್ಣ ಮತ್ತು ದೊಡ್ಡ ವಾಹನಗಳು ಎರಡೂ ಕಡೆಯಿಂದ ಸಂಚರಿಸುವುದರಿಂದ ಪಾದಚಾರಿಗಳಿಗೆ ಓಡಾಡುವುದು ಕಷ್ಟ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಭೆಯಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಇನ್ನು ಮುಂದೆ ಸರ್ಕಾರಿ ಬಸ್ ಬಿಟ್ಟು ದೊಡ್ಡ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿ ಎಂದು ಸ್ಥಳೀಯ ಪೊಲೀಸರಿಗೆ ಮೌಖಿಕಿವಾಗಿ ಎಸ್ಪಿ ಅವರು ಆದೇಶಿಸಿದ್ದರು. ಕೆಲ ದಿನ ಸ್ಥಳೀಯ ಪೊಲೀಸರು ಈ ಆದೇಶವನ್ನು ಪಾಲಿಸಿದರು. ದಿನ ಕಳೆದಂತೆ ಈ ರಸ್ತೆ ಮೇಲೆ ಸರ್ಕಾರಿ, ಖಾಸಗಿ ಬಸ್ ಸೇರಿದಂತೆ ದೊಡ್ಡ ವಾಹನಗಳ ಸಂಚಾರದ ಭರಾಟೆ ತೀವ್ರಗೊಂಡಿದೆ. ಇದರಿಂದ ರಸ್ತೆ ಮೇಲೆ ಪಾದಚಾರಿಗಳು ಸಂಚರಿಸಲು ಸಮಸ್ಯೆಯಾಗುತ್ತಿದೆ. ಅಲ್ಲದೆ ನಿತ್ಯ ಸಂಚರಿಸುವ ಶಾಲಾ-ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಚರಿಸಲು ಪರದಾಡುವಂತಾಗಿದೆ.
ಟಾಪ್ ಪ್ರಯಾಣ: ಗ್ರಾಮೀಣ ಪ್ರದೇಶಗಳಿಂದ ಶಿಗ್ಗಾಂವಿಗೆ ಬರುವ ವಿದ್ಯಾರ್ಥಿಗಳು, ಶಾಲೆ ಸಮಯಕ್ಕೆ ಸರಿಯಾಗಿ ಹೋಗುವ ತರಾತುರಿಯಲ್ಲಿ ಸಿಕ್ಕ ವಾಹನ ಹತ್ತಿ ಶಿಗ್ಗಾಂವಿಗೆ ಬರಬೇಕು. ಶಾಲೆ ಸಮಯ ಮುಗಿದ ಬಳಿಕ ಕತ್ತಲೆಯಾಗುತ್ತಿದ್ದಂತೆ ಊರಿಗೆ ತೆರಳಲು ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳ ಕೊರತೆಯಿಂದ ಖಾಸಗಿ ವಾಹನಗಳಿಗೆ ಮೊರೆಹೋಗುವಂತಾಗಿದೆ. ಖಾಸಗಿ ವಾಹನ ಮಾಲೀಕರು ಶಾಲೆ ಬಿಡುವ ಸಮಯಕ್ಕೆ ಶಾಲೆ ಮುಂದೆ ಹೋಗಿ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ತಮ್ಮ ಊರಿಗೆ ಟಾಪ್ ಮೇಲೆ ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚಿನ ಅನಾಹುತಗಳು ನಡೆಯುವ ಮುನ್ನವೇ ಇಂತಹ ವಾಹನ ಚಾಲಕರ ಮೇಲೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕಿದೆ.
ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಫುಟ್‌ಪಾತ್ ಮಾರ್ಗವನ್ನು ವ್ಯಾಪಾರಿಗಳಿಂದ ಮುಕ್ತಗೊಳಿಸಿ ಪಾದಚಾರಿಗಳಿಗೆ ಸಂಚರಿಸಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆಗೆ ಮುಂದಾಬೇಕಾಗುತ್ತದೆ ಎಂದು ಹರ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮಣ್ಣನವರ ಎಚ್ಚರಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement