ಸುರೇಶಗೌಡರಿಂದ ಕಾಮಗಾರಿ ಸ್ಥಗಿತ
ಬ್ಯಾಡಗಿ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಪರಿಶಿಷ್ಟ ಜಾತಿ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಖುದ್ದಾಗಿ ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ತಮ್ಮ ನೂರಾರು ಬೆಂಬಲಿಗರೊಂದಿಗೆ ಕಟ್ಟಡ ನಿರ್ಮಾಣವಾಗುತ್ತಿರುವ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ತೆರಳಿದ ಮಾಜಿ ಶಾಸಕ ಸುರೇಶಗೌಡ ಕಟ್ಟಡಕ್ಕೆ ಬಳಕೆ ಮಾಡುತ್ತಿರುವ ಕಬ್ಬಿಣ, ಮರಳು, ಸಿಮೆಂಟ್ ಹಾಗೂ ಇಟ್ಟಿಗೆಗಳನ್ನು ಪರೀಕ್ಷಿಸಿದರು. ಆದರೆ, ಸ್ಥಳದಲ್ಲಿ ಸಂಬಂಧಿಸಿದ ಎಂಜಿನಿಯರ್ ಮತ್ತು ಇನ್ನಿತರ ತಾಂತ್ರಿಕ ಸಿಬ್ಬಂದಿ ಇಲ್ಲದೇ ಇರುವುದರಿಂದ ಕಾಮಗಾರಿ ಸ್ಥಗಿತಗೊಳಿಸಿ ಕಟ್ಟಡ ನಿರ್ಮಿಸುತ್ತಿದ್ದ ಕೂಲಿ ಕಾರ್ಮಿಕರನ್ನು ವಾಪಸ್ ಕಳುಹಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರು. 2.81 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿರ್ಮಿತಿ ಕೇಂದ್ರ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಕಾಮಗಾರಿ ಕಳಪೆಯಾಗಿದ್ದು ಸರ್ಕಾರದ ಹಣ ಸದ್ಭಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಸದರಿ ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ಖುದ್ದಾಗಿ ನಿರ್ವಹಿಸದೇ ಬೇರೊಬ್ಬರಿಗೆ ಉಪಗುತ್ತಿಗೆ ನೀಡಿದೆ. ಇದರಿಂದ ಕಳಪೆ ಕಾಮಗಾರಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದರು. ಕಾನೂನು ರೀತ್ಯವಾಗಿ ಉಪಗುತ್ತಿಗೆ ನೀಡಲು ಅವಕಾಶವಿಲ್ಲ. ಅಲ್ಲದೇ ಇಂತಹ ಬೃಹತ್ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇಂದಿಗೂ ಉದ್ಘಾಟನೆಯಾಗಿಲ್ಲ: ತಾಲೂಕಿನ ಕಲ್ಲೆದೇವರ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಿ ವರ್ಷ ಗತಿಸಿದರೂ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ನಿರ್ಮಿತಿ ಕೇಂದ್ರದ ಇಂತಹ ನೂರಾರು ಅವಾಂತರಗಳಿವೆ. ಹೀಗಾಗಿ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡದಂತೆ ತಾಪಂ ಸದಭೆಯಲ್ಲಿ ನಿರ್ಣಯಿಸಲಾಗಿತ್ತೆಂದು ಜ್ಞಾಪಿಸಿದರು.
ಮಣ್ಣು ಮಿಶ್ರಿತ ಮರಳು: ಕಟ್ಟಡಕ್ಕೆ ಬಳಸಲಾಗುತ್ತಿರುವ ಮರಳಿನಲ್ಲಿ ಸಂಪೂರ್ಣವಾಗಿ ಮಣ್ಣು ಮಿಶ್ರಿತವಾಗಿದೆ. ಇದರಿಂದ ಇಂತಹ ಮರಳನ್ನು ಬಳಕೆ ಮಾಡುವುದರಿಂದ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಗೋಡೆಗಳೆಲ್ಲವೂ ನಿರ್ಮಾಣ ಹಂತದಲ್ಲೇ ಬಿರುಕು ಬಿಡುತ್ತಿವೆ. ಹೀಗಾಗಿ ಸರ್ಕಾರದ ಹಣ ದುರುಪಯೋಗವಾಗುತ್ತಿದೆಯಲ್ಲದೇ ಅದರ ಉದ್ದೇಶ ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂದರು. ಕಾಮಗಾರಿಯಲ್ಲಿ ಬಳಕೆ ಮಾಡುತ್ತಿರುವ ಕಬ್ಬಿಣ ಸತ್ವ ರಹಿತವಾಗಿದೆ. ಸಂಬಂಧಿಸಿದ ಎಂಜಿನಿಯರ್ ಈವರೆಗೂ ಪರೀಕ್ಷಿಸಿಲ್ಲ. ಉಪಗುತ್ತಿಗೆಯ ಪರಿಣಾಮ ಹೇಳುವವರು ಕೇಳುವವರೂ ಇಲ್ಲದಂತಾಗಿದೆ. ಇದನ್ನು ಪರೀಕ್ಷಿಸುವ ಗೋಜಿಗೂ ನಿರ್ಮಿತಿ ಕೇಂದ್ರ ಸಿಬ್ಬಂದಿ ಹೋದಂತಿಲ್ಲ ಎಂದು ಆರೋಪಿಸಿದರು.
ರಾಜಕೀಯ ದುರುದ್ದೇಶವಿಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸದರಿ ಕಾಮಗಾರಿ ಸ್ಥಗಿತಗೊಳಿಸುವುದರ ಹಿಂದೆ ರಾಜಕೀಯ ದುರುದ್ದೇಶವಿಲ್ಲ. ಉಪಗುತ್ತಿಗೆ ಹಾಗೂ ಕಳಪೆ ಕಾಮಗಾರಿ ವಿರುದ್ಧ ನಮ್ಮ ಹೋರಾಟ ನಿರಂತರ ಮುಂದುವರಿಯಲಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕಾಮ ಗಾರಿಯನ್ನು ಖುದ್ದಾಗಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು ಹಾಗೂ ಶೀಘ್ರದಲ್ಲೇ ಈ ಕುರಿತು ಲಿಖಿತ ದೂರೊಂದನ್ನು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸುರೇಶ್ ಅಸಾದಿ, ನಾಗರಾಜ ಹಾವನೂರ, ಮಹ್ಮದ್‌ಲಿ ಜಿನ್ನಾ ಹಲಗೇರಿ, ಹೊನ್ನಪ್ಪ ಚಿಕ್ಕಣ್ಣನವರ, ಜಯಪ್ಪ ಹುಣಶೀಮರದ, ಶೇಖಪ್ಪ ಅಗಸನಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.