ಜೆಡಿಎಸ್ ಗೆಲವು ನಿಶ್ಚಿತ: ಬೇವಿನಮರದ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಸುಳ್ಳು ಭರವಸೆಗಳಿಂದ ಜನತೆ ಭ್ರಮನಿರಸನಗೊಂಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರ ಗೆಲವು ನಿಶ್ಚಿತ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೇವಿನಮರದ ಹೇಳಿದರು.
ನಗರದ ಮೆಣಸಿನಕಾಯಿ ಆರ್ಕೆಡ್ನಲ್ಲಿ ಜೆಡಿಎಸ್ ಚುನಾವಣಾ ಪ್ರಚಾರದ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮತದದಾರು ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಕೊಟ್ಟು ನೋಡಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಈ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಾಮಾನ್ಯ ಜನರ ಅಭಿವೃದ್ಧಿ ಅಸಾಧ್ಯ ಎಂಬುದು ಜನರಿಗೆ ಮನವರಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿರುವ ಜನಪರ ಕೆಲಸಗಳ ಬಗ್ಗೆ ಜನರಲ್ಲಿ ಈಗಲೂ ಒಲವು ಇದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆಯೊಂದಿಗೆ ಹಾವೇರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಜಿ ಸಂಸದ ದಿ. ಬಿ.ಎಂ. ಮೆಣಸಿನಕಾಯಿ ಅವರ ಪುತ್ರ ರವಿ ಮೆಣಸಿನಕಾಯಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.
24ರಂದು ನಾಮಪತ್ರ: ಹಾವೇರಿ ಲೋಕಸಭಾ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಮಾತನಾಡಿ, ತಮ್ಮ ತಂದೆ ದಿ. ಬಿ.ಎಂ. ಮೆಣಸಿನಕಾಯಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಕೇವಲ 13 ತಿಂಗಳ ಕಾಲ ಸಂಸದರಾಗಿದ್ದರಿಂದ ಅವರ ಕನಸುಗಳೆಲ್ಲವೂ ಈಡೇರಿಲ್ಲ. ಆದ್ದರಿಂದ ಅವರು ಮಾಡದೇ ಉಳಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ವರಿಷ್ಠರು ತಮ್ಮ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದಾರೆ. ಆ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇನೆ. ತಂದೆಯ ಹೆಸರು ಹೇಳಿಕೊಂಡು ಎಂದೂ ರಾಜಕೀಯ ಮಾಡಿಲ್ಲ. ಸ್ವಂತ ವ್ಯಕ್ತಿತ್ವ ಹಾಗೂ ಪರಿಶ್ರಮದಿಂದ ರಾಜಕೀಯಕ್ಕೆ ಬಂದಿದ್ದೇನೆ. ಹಣ ಬಲವಿಲ್ಲದೇ ಚುನಾವಣೆ ಎದುರಿಸುತ್ತಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಭರವಸೆ ಮೇರೆಗೆ ಮತ ಕೇಳುತ್ತೇನೆ. ಮಾ. 24ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದರು. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ಮಾತನಾಡಿ, ಜಿಲ್ಲೆಯಲ್ಲಿರುವ ಎಸ್ಸಿ, ಎಸ್ಟಿ ಜನಾಂಗಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಅನ್ಯಾಯ ಮಾಡಿವೆ. ಜನರು ಎರಡೂ ಪಕ್ಷಗಳಿಗೆ ಈ ಜನಾಂಗದ ಮತ ಕೇಳುವ ನೈತಿಕ ಹಕ್ಕಿಲ್ಲ. ಈ ಜನರು ಈ ಚುನಾವಣೆಯಲ್ಲಿ ಜೆಡಿಎಸ್ಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು. ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಖ್ವಾಜಾಮೊಹದ್ದೀನ್ ಅಣ್ಣಿಗೇರಿ, ಮಂಜುನಾಥ ಗೌಡಶಿವಣ್ಣವರ, ಮುಖಂಡರಾದ ಉಮೇಶ ತಳವಾರ, ಶಿವು ಹೂಗಾರ, ಎಂ.ಎಚ್. ದೊಡ್ಡಮನಿ, ಶೇಖಪ್ಪ ಕಳ್ಳಮನಿ, ಮುನವರುದ್ದೀನ್ ಜಿ. ಕಮದೋಡ ಇತರರು ಇದ್ದರು.