ನಿರಂಜನಾನಂದಪುರಿ ಶ್ರೀ ಆಶೀರ್ವಾದ ಪಡೆದ ಸಂಸದ ಎಚ್. ವಿಶ್ವನಾಥ್
ಬ್ಯಾಡಗಿ: ಮೈಸೂರು ಕ್ಷೇತ್ರಕ್ಕೆ ಶುಕ್ರವಾರ ನಾಮಪತ್ರ ಸಲ್ಲಿಸಲಿರುವ ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಗುರುವಾರ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಮೈಸೂರು ಕ್ಷೇತ್ರದಲ್ಲಿ ಯಾವುದೇ ತೊಂದರೆಯಿಲ್ಲದೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಕ್ಷೇತ್ರದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದು, ಯಾವುದೇ ಕಾರಣಕ್ಕೂ ನನ್ನ ಕೈಬಿಡುವುದಿಲ್ಲ. ಕಾಂಗ್ರೆಸ್ನಿಂದ ಮಾತ್ರ ದೇಶದ ಜನರಿಗೆ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವೆಂದರು. ಪೀಠದ ಆವರಣದಲ್ಲಿರುವ ಶ್ರೀ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾ ಸಿದ್ಧೇಶ್ವರದೇವಿ ಬ್ರಹ್ಮಲೀನ ಹಾಗೂ ಕನಕದಾಸರ ಗದ್ದುಗೆಗಳಿಗೆ, ಆದಿಕೇಶವ ಸನ್ನಿಧಿಯಲ್ಲೂ ಪೂಜೆ ಸಲ್ಲಿಸಿದರು. ಕನಕಗುರುಪೀಠದ ವಿಭಾಗೀಯ ಶ್ರೀಗಳು, ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡ್ರ ಉಪಸ್ಥಿತರಿದ್ದರು.