ಮತದಾನ ಸಾಂವಿಧಾನಿಕ ಹಕ್ಕು
ಹಾವೇರಿ: ಮತದಾನ ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕಾಗಿದ್ದು, 18 ವರ್ಷ ಪೂರೈಸಿದ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತ ಚಲಾಯಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಬಿ. ಆಂಜನಪ್ಪ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ಹಾವೇರಿ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಮತದಾರರಿಗೆ ಶಿಕ್ಷಣ ಹಾಗೂ ಮತದಾನದಲ್ಲಿ ಭಾಗವಹಿಸುವ ಕುರಿತು ಗುರುವಾರ ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಪ್ರಜೆಯು ಮತದಾನದ ಮಹತ್ವ ಅರಿಯಬೇಕು ಹಾಗೂ ಯಾವುದೇ ಆಸೆ, ಅಮಿಷಕ್ಕೆ ಒಳಗಾಗದೇ ತಮ್ಮ ಹಕ್ಕನ್ನು ನಿರ್ಭಯವಾಗಿ ಚಲಾಯಿಸಬೇಕು ಎಂದು ಅವರು ಹೇಳಿದರು.
ತಹಸೀಲ್ದಾರ ಪಂಪನಗೌಡ ಮೇಲ್ಸಿಮೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಉಮೇಶಬಾಬು ಅವರು ಮತದಾನದ ಮಹತ್ವದ ಕುರಿತು ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಬಿ.ಟಿ. ಭಿಮನಾಯ್ಕರ, ತಾಲೂಕು ಯೋಜನಾಧಿಕಾರಿ ಶಿವಾನಂದ ಕುದರಿ, ವ್ಯವಸ್ಥಾಪಕ ಪಿ.ಬಿ. ಪಾಟೀಲ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು. ತಾಲೂಕು ಸಾಕ್ಷರತಾ ಸಂಯೋಜಕ ಬಿ. ಎಂ. ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್. ಸಿದ್ನೂರಕರ ವಂದಿಸಿದರು.