ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸವಣೂರು: ವೈಭವದ ಸತ್ಯಬೋಧರ ಆರಾಧನೆ

Lingaraj Badiger
Updated On : 21 Mar 2014, 12:01 pm

ಸವಣೂರು: ಉತ್ತರಾಧಿಮಠ ಪರಂಪರೆಯ ರಾಜಯತಿ ಶ್ರೇಷ್ಠರಾದ ಸತ್ಯಬೋಧ ಸ್ವಾಮಿಗಳ 230ನೇ ಆರಾಧನಾ ಮಹೋತ್ಸವ 3 ದಿನಗಳ ಕಾಲ ವೈಭವಪೂರ್ಣವಾಗಿ ನೆರವೇರಿತು.  
ಸವಣೂರಿನಲ್ಲಿರುವ ಸತ್ಯಬೋಧ ಸ್ವಾಮಿಗಳ ಮೂಲ ಬೃಂಧಾವನ ಸನ್ನಿಧಿಯಲ್ಲಿ ಜರುಗಿದ ಆರಾಧನಾ ಕಾರ್ಯಕ್ರಮಗಳು ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ಶ್ರೀಮಠದ ಪರ್ಯಾಯಸ್ಥರಾದ ನರಸಿಂಹಾಚಾರ್ಯ ರಾಯಚೂರ, ಮಾಧವಾಚಾರ್ಯ ರಾಯಚೂರ ಹಾಗೂ ಗುರುರಾಜಾಚಾರ್ಯ ರಾಯಚೂರ ಅವರ ನೇತೃತ್ವದಲ್ಲಿ ಜರುಗಿದವು. ಉದಯರಾಗ, ಅಷ್ಟೋತ್ತರ, ಉಪನ್ಯಾಸ ಗೋಷ್ಠಿ, ರಥೋತ್ಸವ, ಮಹಾ ಪಂಚಾಮೃತ ಅಭಿಷೇಕ, ಸುವರ್ಣ ಕವಚ ಅಲಂಕಾರ, ಕನಕಾಭಿಷೇಕ, ಹಸ್ತೋದಕ, ಅಲಂಕಾರ, ತೀರ್ಥಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಭಾನುವಾರ ಸಂಜೆ ಶ್ರೀಮಠಕ್ಕೆ ಆಗಮಿಸಿದ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನದ ರಘುವಿಜಯ ತೀರ್ಥರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವರ ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವಗಳನ್ನು ಅವರ ಉಪಸ್ಥಿತಿಯಲ್ಲಿ ಕೈಗೊಳ್ಳಲಾಯಿತು. ಸತ್ಯಬೋಧತೀರ್ಥರ ಹಲವಾರು ಮಹಿಮೆಗಳನ್ನು ವಿವರಿಸಿದ ಕೂಡಲಿ ಶ್ರೀಗಳು, ಅಮೃತೋಪದೇಶ ನೀಡಿದರು. ಈ ಸಂದರ್ಭದಲ್ಲಿ ಮಠದ ವತಿಯಿಂದ ಗುರುಗಳಿಗೆ ಗೌರವ ಸಲ್ಲಿಸಲಾಯಿತು. ಭಕ್ತರಿಗೆ ಫಲಮಂತ್ರಾಕ್ಷತೆ ನೀಡಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ವಿಜಯಕುಮಾರ ದೇಸಾಯಿ ಅವರಿಂದ ದಾಸ ಸಾಹಿತ್ಯದ ಸಂಗೀತ ಕಾರ್ಯಕ್ರಮ ಜರುಗಿತು. ದತ್ತಾತ್ರೇಯ ದೇಸಾಯಿ ಕೊಳಲು, ವಾದಿರಾಜ ಆಚಾರ್ಯ ಅವರು ತಬಲಾ ಹಾಗೂ ನಂದಿಕಿಶೋರ ದೇಸಾಯಿ ಅವರು ಹಾರ್ಮೋನಿಯಂ ಸೇವೆ ನೀಡಿದರು. ಮೈಸೂರಿನ ರಾಮಚಂದ್ರದಾಸರ ತಂಡದಿಂದ ಹಾಗೂ ಹುಬ್ಬಳ್ಳಿಯ ಭಾಗ್ಯಶ್ರೀ ಹುಯಿಲಗೋಳ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement