ಗ್ರಾಮಲೆಕ್ಕಿಗ ಲೋಕಾ ಬಲೆಗೆ
ಹಾವೇರಿ: ಖಾತೆ ಬದಲಾವಣೆಗಾಗಿ ರು. 2 ಸಾವಿರ ಲಂಚ ಪಡೆಯುತ್ತಿದ್ದ ನಾಗನೂರು ಗ್ರಾಮ ಲೆಕ್ಕಿಗ ರಾಜೇಂದ್ರ ಹೆಗಡೆ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮದ ಪ್ರಕಾಶ ಕೆಂಚಣ್ಣನವರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಖಾತೆ ಬದಲಾವಣೆಗಾಗಿ ಪ್ರಕಾಶ್ ಅರ್ಜಿ ಸಲ್ಲಿಸಿದ್ದರು. 2 ಸಾವಿರ ಲಂಚ ನೀಡುವಂತೆ ರಾಜೇಂದ್ರ ಹೆಗಡೆ ಬೇಡಿಕೆ ಇಟ್ಟಿದ್ದರು. ಬುಧವಾರ ಲಂಚದ ಹಣವನ್ನು ಹಾವೇರಿ ಮಂಜುನಾಥ ನಗರದಲ್ಲಿರುವ ರಾಜೇಂದ್ರ ಹೆಗಡೆ ಅವರ ನಿವಾಸದಲ್ಲಿ ನೀಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.
'ಹೈಟೈನ್ಷನ್': ಧರಣಿ ಏಳನೇ ದಿನಕ್ಕೆ
ಮಡಿಕೇರಿ: ಕೈಗಾದಿಂದ ಕೊಡಗಿನ ಮೂಲಕ ಕೇರಳಕ್ಕೆ 400 ಕೆ.ವಿ. ಹೈಟೆನ್ಷನ್ ಅಣು ವಿದ್ಯುತ್ ಮಾರ್ಗ ಯೋಜನೆ ವಿರೋಧಿಸಿ ಶ್ರೀಮಂಗಲ ಸಮೀಪದ ಹೇರ್ಮಾಡು ಈಶ್ವರ ದೇವಸ್ಥಾನದ ಸಮೀಪ ಕಾವೇರಿ ಸೇನೆ ಹಾಗೂ ರೈತ ಸಂಘಟನೆ ಕೈಗೊಂಡಿರುವ ಅಹೋರಾತ್ರಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ಮಾತನಾಡಿದ ಕಾವೇರಿ ಸೇನೆ ಜಿಲ್ಲಾ ಸಂಚಾಲಕ ರವಿ ಚಂಗಪ್ಪ, ಅಹೋರಾತ್ರಿ ಧರಣಿಗೆ ರೈತರಿಂದ ನಿರೀಕ್ಷೆಗೂ ಮೀರಿ ಬೆಂಬಲ ದೊರೆಯುತ್ತಿದೆ ಎಂದರು.