ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಹಾರ ಹಣ ಶೀಘ್ರ ನೀಡಿ

Mainashree
Updated On : 29 Mar 2014, 9:51 am

ಬ್ಯಾಡಗಿ: ಕಳಪೆ ಹತ್ತಿ ಬೀಜದ ಪರಿಹಾರದ ಹಣ ವಿತರಿಸುವುದೂ ಸೇರಿದಂತೆ ಗೋವಿನಜೋಳ ಖರೀದಿಸಿದ ಹಣವನ್ನು ರೈತರಿಗೆ ಪಾವತಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕ ಘಟಕದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದಲ್ಲಿ ಸಂಚರಿಸಿ, ಬಳಿಕ ತಹಸೀಲ್ದಾರ್ ಶಿವಶಂಕರ್ ನಾಯಕ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಕಳಪೆ ಹತ್ತಿ ಬೀಜ ಬಿತ್ತನೆಮಾಡಿ ಕೈಸುಟ್ಟುಕೊಂಡಿರುವ ರೈತನಿಗೆ ಸರ್ಕಾರ ಪರ್ಯಾಯವಾಗಿ ಪರಿಹಾರ ಘೋಷಿಸಿದೆ. ಆದರೆ, ನೀತಿಸಂಹಿತೆ ನೆಪವೊಡ್ಡಿ ಕೃಷಿಕರಿಗೆ ತಲುಪಬೇಕಾದ ಪರಿಹಾರದ ಹಣವನ್ನು ನೀಡದೇ ಸರ್ಕಾರ ಸತಾಯಿಸುತ್ತಿದೆ. ಇದರಲ್ಲಿ ಮತದಾರರನ್ನು ಆಮಿಷಕ್ಕೊಳ್ಳಪಡಿಸುವ ಭಾಗವಾದರೂ ಎಲ್ಲಿದೆ? ಎಂದು ಚುನಾವಣೆ ಆಯೋಗವನ್ನು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ತೀರ್ಮಾನಕ್ಕೆ ಬೆಲೆ ಇರಬೇಕು. ಲಕ್ಷಾಂತರ ರೈತರು ಪರಿಹಾರದ ಹಣಕ್ಕಾಗಿ ಕಾಯ್ದು ಕುಳಿತಿದ್ದಾರೆ. ಇದರಿಂದ ಕೆಸಿಸಿ ಬ್ಯಾಂಕ್ ಸೊಸೈಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲಕ್ಕೆ ಮಾ. 31ರ ಬಳಿಕ ಸುಸ್ತಿ ಬಡ್ಡಿ ಬೀಳುತ್ತದೆ. ಕೂಡಲೇ ಕಳಪೆ ಹತ್ತಿ ಬೀಜದ ಪರಿಹಾರದ ಹಣ ಸೇರಿದಂತೆ ಗೋವಿನಜೋಳ ಖರೀದಿ ಹಣವನ್ನು ರೈತರಿಗೆ ಪಾವತಿಸುವ ಮೂಲಕ ಬ್ಯಾಂಕಿನ ಸಾಲ ತುಂಬಲು ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.
ಮೋಟೆಬೆನ್ನೂರು ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳಪೆ ಹತ್ತಿ ಬೀಜದಿಂದ ರೈತರು ಈಗಾಗಲೇ ಕಂಗೆಟ್ಟಿದ್ದಾರೆ. ಅಲ್ಲದೇ ಮುಂಗಾರು ಹಂಗಾಮು ಪ್ರಾರಂಭವಾಗಲಿದ್ದು ಬೀಜ, ಗೊಬ್ಬರ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗೆ ಹಣಕಾಸಿನ ಅವಶ್ಯಕತೆಯಿದೆ ಇದೆ ಎಂದರು.
ನೀತಿ ಸಂಹಿತೆ ಜೂನ್‌ಗೆ ಪೂರ್ಣಗೊಳ್ಳಲಿದ್ದು, ಪರಿಹಾರದ ಮೊತ್ತ ಪಡೆಯಲು ಕನಿಷ್ಠ  2 ತಿಂಗಳು ಅಂದರೆ ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳವರೆಗೂ ಕಾಯಬೇಕಾಗುತ್ತದೆ. ಕೂಡಲೇ ಚುನಾವಣೆ ಆಯೋಗ ಮರು ಪರಿಶೀಲಿಸಿ, ಕೃಷಿಕರಿಗೆ ಪರಿಹಾರದ ಮೊತ್ತವನ್ನು ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದರು.ಗಂಗಣ್ಣ ಎಲಿ ಮಾತನಾಡಿ, ಚುನಾವಣೆ ಮುನ್ನವೇ ಕಳಪೆಬೀಜಕ್ಕೆ ಘೋಷಿಸಿದ ಪರಿಹಾರ ರೈತನಿಗೆ ತಲುಪಬೇಕು. ಇಲ್ಲದಿದ್ದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬರಬೇಕಾಗುತ್ತದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಪಂಚೇಂದ್ರಿಯಗಳಿದ್ದರೆ ಅನ್ನದಾತನನ್ನು ಬೀದಿಗೆ ತರುತ್ತಿದ್ದಿಲ್ಲ. ಆತ್ಮಗೌರವ ಕಳೆದುಕೊಂಡ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.  ಬಹು ದಿನದ ಹೋರಾಟದ ಫಲವಾಗಿ ಪರಿಹಾರ ಪಡೆಯಲಾಗಿದೆ. ಆದರೆ, ಚುನಾವಣೆ ನೀತಿ ಸಂಹಿತೆ ನುಂಗಲಾರದ ತುತ್ತಾಗಿದ್ದು ಸಾಲ ಮರುಪಾವತಿಗೆ ಬ್ಯಾಂಕಿನ ಅಧಿಕಾರಿಗಳ ಒತ್ತಡ ಒಂದೆಡೆ, ಗೋವಿನಜೋಳ ಮಾರಾಟ ಮಾಡಿದ ಹಣ ಮತ್ತು ಕಳಪೆ ಹತ್ತಿಬೀಜದ ಪರಿಹಾರ ಮೊತ್ತ ಕೈತಲುಪದೇ ತಡಕಾಡುತ್ತಿರುವ ರೈತ. ಕೂಡಲೇ ಪರಿಹಾರದ ಮೊತ್ತ ಬಿಡುಗಡೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಕೆ.ವಿ. ದೊಡ್ಡಗೌಡ್ರ, ಮಲಕಪ್ಪ ಹಾದರಗೇರಿ, ಅಶೋಕ ಅಗಡಿ, ಆಶೋಕ ಮಾಳೇನಹಳ್ಳಿ ಶಿವರುದ್ರ ಉಪ್ಪಾರ, ಮಂಜಣ್ಣ ಬಾರ್ಕಿ, ಪ್ರಶಾಂತ ಹಾಲನಗೌಡ್ರ, ಶಶಿಧರಸ್ವಾಮಿ ಛತ್ರದಮಠ, ಶಂಭಣ್ಣ ಬಿದರಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement