ವಿವಿಧ ವಸ್ತುಗಳಲ್ಲಿ ಕಲೆ ಅರಳಿಸುವ ಚತುರ
ಕನ್ನಡಪ್ರಭ ವಾರ್ತೆ, ಗಂಗಾವತಿ, ಮಾ. 28
ಮೊಟ್ಟೆಯಲ್ಲಿ ಕರ್ನಾಟಕ, ನಕಾಶೆ ನಿರ್ಮಾಣ... ಗಾಜಿನ ಬಾಟಲಿಯಲ್ಲಿ ಅನುಭವ ಮಂಟಪ...!
ಹೌದು, ಇದು ಯಾವುದೇ ಜಾದೂ ಅಲ್ಲ, ಗಂಗಾವತಿಯ ಕಲಾವಿದನೊಬ್ಬ ವಿವಿಧ ವಸ್ತುಗಳಲ್ಲಿ ಇಂತಹ ಆಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಗಂಗಾವತಿಯಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರರಾಗಿದ್ದ (ಪ್ರಸ್ತುತ ಸಿಂಧನೂರು ತಹಸೀಲ್ದಾರ್ ಕಚೇರಿ) ತಿಮ್ಮನಗೌಡ ಪಾಟೀಲ ಅವರ ಪುತ್ರ ರವೀಂದ್ರ ಪಾಟೀಲ ವಸ್ತುಗಳ ಕೆತ್ತನೆಯಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಬಿಕಾಂ ಪದವೀಧರರಾಗಿರುವ ರವೀಂದ್ರ ಪಾಟೀಲ, ಮೊಟ್ಟೆಯೊಳಗೆ ಕರ್ನಾಟಕ ಹಾಗೂ ಭಾರತದ ನಕಾಶೆಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಚಾಕಪೀಸ್, ಸೋಪ್ ಮತ್ತು ತನ್ನ ಉಗುರು ಬೆಳೆಸಿ ಗೋಪುರ ರಚಿಸಿದ್ದಾರೆ. ಅಲ್ಲದೆ ಪುಸ್ತಕವನ್ನು ಕೊರೆದು ಕಲಾಕೃತಿ ರಚಿಸಿದ್ದಾರೆ.
ಮೊಟ್ಟೆಯೊಳಗೆ ಕರ್ನಾಟಕ: ಮೊಟ್ಟೆ ಒಡೆದರೆ ಕೈಗೆ ಸಿಗಲಾರದು. ಆದರೆ, ಕಲಾವಿದ ರವೀಂದ್ರ ಪಾಟೀಲ ಮೊಟ್ಟೆ ಒಳಗೆ ಇರುವ ಎಲ್ಲಾ ದ್ರವವನ್ನು ತೆಗೆದು ಒಣಗಿಸಿ ಅದರೊಳಗೆ ಚಾಣಕ್ಷತನದಿಂದ ಕರ್ನಾಟಕ ನಕಾಶೆಯನ್ನು ತಯಾರಿಸಿ ಬಣ್ಣ ನೀಡಿದ್ದಾರೆ. ಅದರಂತೆ ಮೊಟ್ಟೆಯೊಳಗೆ ಭಾರತ ನಕಾಶೆಯನ್ನು ತಯಾರಿಸಿ ಗಾಜಿನ ಪೆಟ್ಟಿಗೆಯೊಳಗೆ ರಕ್ಷಣೆ ಮಾಡಿದ್ದಾರೆ.
ಬಾಟಲಿಯಲ್ಲಿ ಅನುಭವ ಮಂಟಪ: ಗಾಜಿನ ಬಾಟಲಿಯಲ್ಲಿ ಇಟ್ಟಿಗೆಯಿಂದ ಅನುಭವ ಮಂಟಪವನ್ನು ರಚಿಸಿದ್ದಾರೆ. ಬಾಟಲಿಯೊಳಗೆ ಕೈ ಸೇರುವುದೆ ಕಷ್ಟ ಆದರೆ ಕಲಾವಿದ ಚಿಮಟಗಿಯನ್ನು ಬಳಸಿಕೊಂಡು ಇಟ್ಟಿಗೆಯ ಚೂರುಗಳನ್ನು ಬಾಟಲಿಯಲ್ಲಿ ಹಾಕಿ ಅನುಭವ ಮಂಟಪವನ್ನು 3-4 ದಿನಗಳಲ್ಲಿ ರಚಿಸಿರುವುದು ದೊಡ್ಡ ಸಾಧನೆ. ಮಂಟಪವಲ್ಲದೆ ಅದರೊಳಗೆ ಈಶ್ವರ ದೇವರನ್ನು ಪ್ರತಿಷ್ಠಾಪಿಸಿರುವುದು ಸಾಧನೆಯಾಗಿದೆ. ಅಲ್ಲದೆ ಸಾಬೂನುಗಳನ್ನು ಬಳಕೆ ಮಾಡಿ ಪ್ರಸಿದ್ಧ ಐಹೊಳೆ, ಪಟ್ಟದ ಕಲ್ಲು, ಬಾದಾಮಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳನ್ನು ರಚಿಸಿದ್ದಾರೆ.
ಚಾಕ್ಪೀಸ್ನಿಂದ ಕಲಾಕೃತಿ: ಚಾಕ್ಪೀಸ್ ಬಳಸಿಕೊಂಡು ಸರಗಳನ್ನು ಮತ್ತು ಸ್ಪ್ರಿಂಗ್ ಮತ್ತು 21 ಸೆ.ಮೀ. ಉದ್ದದ ಸರವನ್ನು ತಯಾರಿಸಿದ್ದಾರೆ. ಅಲ್ಲದೇ ಟ್ಯೂಬ್ಲೈಟ್, ಸರಗಳ ಗುಂಡುಗಳು ರಚಿಸಿದ್ದಾರೆ. ಚಾಕ್ಪೀಸ್ಗಳಲ್ಲಿ ಗೋಲಿಗುಂಡು, ಸಿಹಿ ತಿನಿಸುಗಳ ಆಕೃತಿ, ಉದ್ದವಾದ ಹಗ್ಗದ ಮಾದರಿ ಸೇರಿದಂತೆ ವಿವಿಧ ಆಕೃತಿಗಳನ್ನು ಕೆತ್ತಿದ್ದಾರೆ.
ಉಗುರಿನಲ್ಲಿ ಪ್ಯಾರೀಸ್ ಟವರ್: ಕಲಾವಿದ ರವೀಂದ್ರ ಪಾಟೀಲ ತನ್ನ ಉಗುರಿನಿಂದ ಪ್ಯಾರೀಸ್ ಟವರ್ ರಚಿಸಿರುವುದು ಸಾಧನೆಯಾಗಿದೆ. ತಾನು 7 ವರ್ಷದಿಂದ ಬಿಟ್ಟಿದ್ದ ಉಗುರುಗಳನ್ನು ಕತ್ತರಿಸಿ 3 ತಿಂಗಳಲ್ಲಿ ಟವರ್ ರಚಿಸಿ ಸಾಧನೆ ಮಾಡಿದ್ದಾರೆ. ಟವರ್ಗೆ ಕಲ್ಲಿನ ಕಂಬ ಬಳಸಿ ಅದಕ್ಕೆ ತನ್ನ ಉಗುರಿನ ಚೂರುಗಳನ್ನು ಬಳಕೆ ಮಾಡಿ, ಆಕೃತಿ ರಚಿಸಿದ್ದಾರೆ. ಪುಸ್ತಕದಲ್ಲಿ ಹಂಪಿ ಸ್ಮಾರಕ ಮತ್ತು ಪುಷ್ಕರಣಿ ಹಾಗೂ ಸೀಸ್ ಪೆನ್ಸಿಲ್ಗಳಲ್ಲಿ ಆಕೃತಿಗಳನ್ನು ರಚಿಸಿದ್ದಾರೆ.
ಸಮ್ಮೇಳನದಲ್ಲಿ ಪ್ರದರ್ಶನವೇ ತೃಪ್ತಿ: ಮೂರು ವರ್ಷಗಳ ಹಿಂದೆ ಗಂಗಾವತಿಯಲ್ಲಿ ಜರುಗಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಕೃತಿಗಳನ್ನು ಪ್ರದರ್ಶನ ಮಾಡಿರುವುದೇ ತನಗೆ ತೃಪ್ತಿ ತಂದಿದೆ ಎಂದು ಕಲಾವಿದ ರವೀಂದ್ರ ಪಾಟೀಲ ಅಭಿಪ್ರಾಯಿಸಿದ್ದಾರೆ. ಅಲ್ಲದೆ ಈಚೆಗೆ ಗಂಗಾವತಿ ನಗರದಲ್ಲಿ ಜರುಗಿದ 3ನೇ ತಾಲೂಕು ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ್ದು, ಜನರ ಗಮನ ಸೆಳೆದಿದ್ದು, ತಮಗೆ ಪ್ರಶಂಸೆ ವ್ಯಕ್ತಪಡಿಸಿರುವುದೆ ನನಗೆ ಶಕ್ತಿ ನೀಡಿದೆ ಎನ್ನುತ್ತಾರೆ. ಎಲೆಮರೆ ಕಾಯಿಯಂತೆ ಇರುವ ಇಂತಹ ಪ್ರತಿಭಾವಂತರನ್ನು ಇಲಾಖೆ ಅಥಾವ ಸಂಬಂಧಪಟ್ಟ ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡಿದರೆ ಕಲಾವಿದರ ಸಾಧನೆಗೆ ಗೌರವ ಲಭಿಸಿದಂತಾಗುತ್ತದೆ.
ರಾಮಮೂರ್ತಿ ನವಲಿ