ಹಾವೇರಿ ಮಾದರಿ ಕ್ಷೇತ್ರವನ್ನಾಗಿಸುವೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 28
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಡಿದ ಕೆಲಸ ಏನು ? ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಎಷ್ಟು ಬಾರಿ ಪ್ರವಾಸ ಮಾಡಿದ್ದಾರೆ? ಅವರು ಕೇವಲ ಪ್ರೋಟೋಕಾಲ್ ಸಂಸದರಾಗಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಟೀಕಿಸಿದರು.
ತಾಲೂಕಿನ ಬೆಳಗಾಲಪೇಟೆಯಲ್ಲಿ ಕ್ಷೇತ್ರದ ಮೊದಲ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ 20ಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಯಾಗುವುದಲ್ಲದೆ, ದೇಶದಲ್ಲಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಸಂಸದರಾಗಿ ಈಗ ಮತ್ತೆ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಶಿವಕುಮಾರ ಉದಾಸಿ ಜನರ ನೋವು, ನಲಿವುಗಳಿಗೆ ಸ್ಪಂದಿಸಲೇ ಇಲ್ಲ. ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು. ಯುವಕರು, ಹಿರಿಯರೂ ಒಟ್ಟಾಗಿ ಈಗ ತಮ್ಮನ್ನು ಬೆಂಬಲಿಸುತ್ತಿದ್ದಾರೆ. ಇವೆಲ್ಲ ತಮ್ಮ ಗೆಲುವಿಗೆ ಸಹಕಾರಿಯಾಗಲಿವೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ ಎಂದರು. ಹಾವೇರಿ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದು ತಮ್ಮ ಆದ್ಯತೆಯಾಗಿದೆ. 15 ಲಕ್ಷ ಮತದಾರರನ್ನೊಳಗೊಂಡ ಈ ಕ್ಷೇತ್ರವನ್ನು ಜನತೆಯ ಆಶೋತ್ತರಗಳಿಗನುಗುಣವಾಗಿ ಅಭಿವೃದ್ಧಿಗೊಳಿಸಲು ಬದ್ಧ. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನನಗೆ ಈ ಬಾರಿ ಸಂಸತ್ ಸದಸ್ಯನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತದಾರರು ಆಶೀರ್ವದಿಸುವುದು ಖಚಿತ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ಜನಸಂಪರ್ಕವೇ ಇಲ್ಲದ ಶಿವಕುಮಾರ ಉದಾಸಿ ಅವರ ಬಗೆಗೆ ಮತದಾರರು ಭ್ರಮನಿರಸನಗೊಂಡಿದ್ದಾರೆ. ಈ ಬಾರಿ ಸಲೀಂ ಅಹಮದ್ ಅವರಿಗೆ ಮತದಾರರು ಆಶೀರ್ವದಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿದರು. ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ, ಕೆಪಿಎಸ್‌ಸಿ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಮುಖಂಡರಾದ ಯಾಸೀರಖಾನ ಪಠಾಣ, ಎನ್.ಎಸ್. ಪಡೆಪ್ಪನವರ, ವೀರಪ್ಪ ಮಡ್ಲೂರ, ಎ.ಎಂ. ಪಠಾಣ, ಆರ್.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಸಿ.ಎಸ್. ಬಡಿಗೇರ, ರಾಜಣ್ಣ ಹಿರೇಮಠ, ಮಹ್ಮದ್ ಇಕ್ಬಾಲ ನದಾಫ, ವಾಸೂ ಊರಣಕರ, ಉದಯ ಉರಣಕರ, ಎಂ.ಎಸ್. ಪಾಟೀಲ, ಮಲ್ಲಿಕಾರ್ಜುನ ದೇವಣ್ಣನವರ, ಸುರೇಶ ನೆರ್ಕಿಮನಿ, ಕಲವೀರಪ್ಪ ಪವಾಡಿ, ಸಿ.ಬಿ. ಮಲ್ಲಮ್ಮನವರ, ಲಕ್ಷ್ಮಣ ಮಾಳಿ, ಚನ್ನಬಸಪ್ಪ ಶಿಗ್ಗಾಂವಿ, ದಾನಪ್ಪ ಗಂಟೇರ, ಹಾಶಂಪೀರ ಇನಾಂದಾರ, ಶಿವಾನಂದಪ್ಪ ಕ್ಯಾಸನಕೇರಿ ಮುಂತಾದವರು ಪಾಲ್ಗೊಂಡಿದ್ದರು.