ಬಿಜೆಪಿ ಅಭ್ಯರ್ಥಿ ಪರ ಇಂದು ಬಿಎಸ್ವೈ ಪ್ರಚಾರ
ಹಾವೇರಿ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಪ್ರಚಾರ ಕೈಗೊಳ್ಳಲು ಭಾನುವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಹಾಗೂ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಅಧ್ಯಕ್ಷ ಭೋಜರಾಜ ಕರೂದಿ, ಮಾಜಿ ಸಚಿವ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗೇಂದ್ರ ಕಟಕೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೊಟಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಮಲ್ಲೇಶಪ್ಪ ಹರಿಜನ ಮತ್ತು ಗುಡ್ಡನಗೌಡ ಅಂದಾನಿಗೌಡ್ರ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಜಾಗೃತಿ ಜಾಥಾ
ಬಳ್ಳಾರಿ: ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಹೊಸ ಮೋಕಾ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಸ್ವಯಂಸೇವಕರಿಂದ ಗ್ರಾಮಸ್ಥರಿಗೆ ಪರಿಸರ ಸಂರಕ್ಷಣೆ, ಸ್ವಚ್ಛತೆ, ಶಿಕ್ಷಣದ ಮಹತ್ವ, ರಕ್ತದಾನದ ಬಗ್ಗೆ ತಿಳಿವಳಿಕೆ ಮೂಡಿಸಲು ಕಾಲ್ನಡಿಗೆ ಜಾಥಾ ನಡೆಸಲಾಯಿತು. ಹೊಸಮೋಕಾದ ಬೀದಿ ಬೀದಿಗಳಲ್ಲೂ ಸಂಚರಿಸಿದ ಸ್ವಯಂ ಸೇವಕರು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ನಂತರ ಗ್ರಾಮದ ಸುತ್ತಮುತ್ತಲಿನ ಕೊಳಚೆ ಪ್ರದೇಶ ಸ್ವಚ್ಛ ಮಾಡಿದರು. ಸಂಜೆ ಉಪನ್ಯಾಸ, ಭಾವಗೀತೆ, ಕ್ರಾಂತಿಗೀತೆ, ಸಾಂಸ್ಕೃತಿಕ ಕಾರ್ಯಕ್ರಮ, ನಡೆಯಿತು.
ಅನುದಾನ ವಾಪಸ್ ಅನಂತ್ ಸಾಧನೆ
ಕುಮಟಾ: ಈ ತನಕ ಜಿಲ್ಲೆಯ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಸರ್ಕಾರದ ಅನುದಾನ ಸದ್ಬಳಕೆ ಮಾಡದೇ ಇರುವ ಕಾರಣದಿಂದ ಅರ್ಧದಷ್ಟು ಅನುದಾನ ವಾಪಸ್ ಹೋಗಿದ್ದು ಅವರ ದೊಡ್ಡ ಸಾಧನೆಯಾಗಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಹೇಳಿದರು. ಅವರು ನಾದಶ್ರೀ ಕಲಾಕೇಂದ್ರದಲ್ಲಿ ಏರ್ಪಡಿಸಲಾದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಾಸಕಿ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಜಿ.ಜಿ. ಹೆಗಡೆ, ಪುರಸಭೆ ಅಧ್ಯಕ್ಷೆ ದಾಕ್ಷಾಯಿಣಿ ಅರಿಗ, ಪುರಸಭೆ ಸದಸ್ಯ ಮದುಸೂಧನ ಶೇಟ್ ಇದ್ದರು.
ಪ್ರಶಾಂತ ದೇಶಪಾಂಡೆ ಗೆಲುವು ಖಚಿತ
ಹೊನ್ನಾವರ: 2014ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದ್ದು ಬಿಜೆಪಿ ಹೇಳುವಂತೆ ರಾಜ್ಯದಲ್ಲಿ ಎಲ್ಲಿಯೂ ಮೋದಿ ಅಲೆ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜನಪರ ಕಾರ್ಯಕ್ರಮದಿಂದಾಗಿ ಪ್ರಬಲವಾಗಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿರುವುದರಿಂದ ಉ.ಕ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಗೆಲುವು ಖಚಿತ ಎಂದು ಉ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ತೆಂಗೇರಿ ತಿಳಿಸಿದರು. ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವಂತೆ ರಾಷ್ಟ್ರದ ಶೇ. 40ರಷ್ಟಿರುವ ಯುವಕರ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿ ಎಂಬ ಮಾನದಂಡದಡಿಯಲ್ಲಿ ಯುವ ನಾಯಕ ಪ್ರಶಾಂತ ದೇಶಪಾಂಡೆ ಉ.ಕ. ಕ್ಷೇತ್ರದ ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ಯುವಕರ ಸ್ಫೂರ್ತಿಯ ಸೆಲೆಯಾಗಿರುವ ಪ್ರಶಾಂತ ದೇಶಪಾಂಡೆಯವರ ಗೆಲುವು ನಿಶ್ಚಿತ ಎಂದರು.
ಕೊಪ್ಪಳ: ಮತದಾನ ಜಾಗೃತಿ ಜಾಥಾ
ಕೊಪ್ಪಳ: ಮತದಾರರಲ್ಲಿ ಕಡ್ಡಾಯ ಮತದಾನದ ಪ್ರಜ್ಞೆಯನ್ನು ಜಾಗ್ರತಗೊಳಿಸಲು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶನಿವಾರ ನಗರದಲ್ಲಿ ವಿದ್ಯಾರ್ಥಿಗಳ ಬೃಹತ್ ಜಾಥಾ ನಡೆಸಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಮಲಾಪುರ ಅವರು ಪಾರಿವಾಳ ಹಾರಿಬಿಡುವ ಮೂಲಕ ಮತದಾರರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಪೂರ್ವದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಗರದ ವಿವಿಧ ಪ್ರದೇಶಗಳಲ್ಲಿ ಜಾಥಾ ನಡೆಸಿ, ಘೋಷಣೆಗಳನ್ನು ಹಾಕುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಪ್ರಾಚಾರ್ಯ ರಾಜಶೇಖರ ಬಿ. ಗಾಂಜಿ, ಸಂಸ್ಥೆಯ ಉಪನ್ಯಾಸಕ ವರ್ಗ, ಗುರು ಮಾತೆಯರು ಇದ್ದರು.
ಆಟೋ ಚಾಲಕರಿಂದ ಮತದಾರರ ಜಾಗೃತಿ
ಕಾರವಾರ: ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವಂತೆ ಸಾರುವ ಸಂದೇಶಗಳನ್ನು ಒಳಗೊಂಡ ಸ್ಟಿಕ್ಕರಗಳನ್ನು ತಮ್ಮ ಅಟೋ ಹಾಗೂ ಟೆಂಪೋಗಳಿಗೆ ಅಳವಡಿಸುವ ಮೂಲಕ ಕಾರವಾರದ ಖಾಸಗಿ ವಾಹನ ಚಾಲಕರು ಮತದಾನ ಜಾಗೃತಿ ಅಭಿಯಾನದಲ್ಲಿ ಶನಿವಾರ ಕೈಜೋಡಿಸಿದರು. ಖಾಸಗಿ ವಾಹನಗಳಿಗೆ ಮತದಾನ ಜಾಗೃತಿ ಸ್ಟಿಕ್ಕರ್ಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಟಿ. ರೇಜು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುನಾಲ್ಕರ್ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ರಮೇಶ್, ಎನ್.ಜಿ. ಹಿತ್ತಲಮಕ್ಕಿ ಮತ್ತಿತರರಿದ್ದರು.
ಕೊಪ್ಪಳದಲ್ಲಿ ಏ. 2ಕ್ಕೆ ಮ್ಯಾರಥಾನ್
ಕೊಪ್ಪಳ: ನಗರದಲ್ಲಿ ಮತದಾರರ ಜಾಗೃತಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಎಲ್ಲ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಏ. 2ರಂದು ಬೆಳಗ್ಗೆ 8.30ಕ್ಕೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್ ತಿಳಿಸಿದ್ದಾರೆ. ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಪ್ರಾರಂಭವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನ ಪ್ರವೇಶಿಸಿ ಮುಕ್ತಾಯಗೊಳಿಸಲಾಗುವುದು. ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ವೈ. ಸುದರ್ಶನ್ರಾವ್ ಮನವಿ ಮಾಡಿದ್ದಾರೆ.
ಶ್ರೀನಿವಾಸ ಬನ್ನಿಗೋಳ ಅವಿರೋಧ ಆಯ್ಕೆ
ಹುಬ್ಬಳ್ಳಿ: ಹೊಸದಿಲ್ಲಿಯ ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ನ (ಸಿಸಿಐಎಂ) ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಗರದ ಡಾ. ಶ್ರೀನಿವಾಸ ಬನ್ನಿಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಸಿಸಿಐಎಂ ಸದಸ್ಯರಾಗಿ ಆಯುರ್ವೇದ ಶಿಕ್ಷಣ ಹಾಗೂ ಚಿಕಿತ್ಸಾ ಪದ್ಧತಿಯ ಬೆಳವಣಿಗಾಗಿ ಇವರು ಮಾಡಿರುವ ಸೇವೆಗೆ ಈ ಗೌರವ ಸಂದಿದೆ. ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ನ ಕಾರ್ಯಕಾರಿ ಮಂಡಳಿ ಸರ್ವೋಚ್ಛ ಸಂಸ್ಥೆಯಾಗಿದ್ದು, ಆಯುರ್ವೇದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಬೆಳವಣಿಗೆಗೆ ಆವಶ್ಯಕ ಇರುವ ನಿರ್ಣಯಗಳನ್ನು ಕೈಗೊಳ್ಳುವ ಹಾಗೂ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಕಾರ್ಯವ್ಯಾಪ್ತಿ ಹೊಂದಿದೆ. ಡಾ. ಶ್ರೀನಿವಾಸ ಬನ್ನಿಗೋಳ ಅವರು ನಗರದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.
'ನಮ್ಮ ಮತ ನಮ್ಮ ಹಕ್ಕು' ನಾಟಕ ಪ್ರದರ್ಶನ
ಹಿರೇಕೆರೂರು: ಜಿಲ್ಲಾಡಳಿತ, ವಾರ್ತಾ ಪ್ರಚಾರ ಇಲಾಖೆ ಗ್ರಾಮ ಪಂಚಾಯಿತಿ ರಟ್ಟಿಹಳ್ಳಿ ಇವರ ಸಹಯೋಗದಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅವರಣದಲ್ಲಿ ಮತದಾನ ಜಾಗೃತಿ ಬೀದಿ ನಾಟಕ ಜರುಗಿತು. ರಾಣಿಬೆನ್ನೂರು ತಾಲೂಕಿನ ಜನನಿ ಜಾನಪದ ಕಲಾವೇದಿಕೆ ಯಕಲಾಸಪುರ ನಾಟಕ ಕಲಾವಿದರು ಅಭಿನಯಿಸಿದ ನಮ್ಮ ಮತ ನಮ್ಮ ಹಕ್ಕು, ಎಂಬ ಬೀದಿ ನಾಟಕ ಜನಮನ ಸೆಳೆಯಿತು. ಕಲಾವಿದರಾದ ಪರಶುರಾಮ ಬಣಕಾರ, ಬಸವರಾಜ ಕೊಳಚಿ, ಚಂದ್ರಪ್ಪ ದೊಡಮನಿ, ಸರೋಜ ಸಣಕಂಬಿ, ರಮೇಶನಾಯಕ, ರಾಜು ಸೋರವೆ, ಲಿಂಗರಾಜ ಕೊಳಚಿ, ಗದಿಗೆಪ್ಪ ಬಿಜ್ಜೂರ ನಾಟಕದಲ್ಲಿ ಅಭಿನಯಿಸಿದ್ದರು.
ಬಿಜೆಪಿಯಿಂದ ಮನೆಮನೆ ಪ್ರಚಾರ, ಮತಯಾಚನೆ
ಹಾವೇರಿ: ಬಿಜೆಪಿ ಶಹರ ಘಟಕದಿಂದ ಮನೆಮನೆಗೆ ಬಿಜೆಪಿ ಕಾರ್ಯಕ್ರಮದಡಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಪ್ರಚಾರ ನಡೆಸಿದರು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾರ್ಯವೈಖರಿ ಮತ್ತು ಕ್ಷೇತ್ರದ ಅಭ್ಯರ್ಥಿ ಶಿವಕುಮಾರ ಉದಾಸಿಯವರನ್ನು ಬೆಂಬಲಿಸಿ ನಗರದ 26 ಹಾಗೂ 31ನೇ ವಾರ್ಡಿನ ವ್ಯಾಪ್ತಿಯ ವಿಜಯನಗರ, ಉದಯನಗರ, ಶಿವಲಿಂಗ ನಗರ, ಕೆಇಬಿ, ಜಿಲ್ಲಾ ಆಸ್ಪತ್ರೆ, ತಾಜ್ ನಗರ, ಆನಿಹೊಂಡ, ದಾನೇಶ್ವರಿ ನಗರ, ವೈಭವಿ ಲಕ್ಷ್ಮೀ ಪಾರ್ಕ್, ಅಶ್ವಿನಿ ನಗರ ಪ್ರದೇಶದಲ್ಲಿ ಕಾರ್ಯಕರ್ತರು ಪ್ರಚಾರ ಕೈಗೊಂಡರು. ಪ್ರಮುಖರಾದ ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ತಾಲೂಕು ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ನಗರಸಭಾ ಸದಸ್ಯ ಸುರೇಶ ದೊಡ್ಡಮನಿ, ಹನುಮಂತ ನಾಯಕ ಬದಾಮಿ, ಶಿವಬಸಪ್ಪ ವನ್ನಳ್ಳಿ, ನಜಗುನ್ನಿಸಾ ನದಾಫ್, ಯಲ್ಲವ್ವ ಬೆಂಗಳೂರ, ನಿರಂಜನ ಹೇರೂರ, ಕರಿಬಸಪ್ಪ ಹಳದೂರ ಮತ್ತಿತರರು ಇದ್ದರು.
ಪರಿಷತ್ ಸದಸ್ಯರಾಗಿ ಎಸ್.ಬಿ. ಚೆನ್ನಗೌಡ್ರ ಆಯ್ಕೆ
ಹಿರೇಕೆರೂರು: ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸಹಕಾರಿ ವಿದ್ಯಾಸಂಸ್ಥೆಯ ಬಿ. ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಬಿ. ಚೆನ್ನಗೌಡ್ರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ ಸದಸ್ಯರಾಗಿ ಎರಡನೇ ಭಾರಿಗೆ ಆಯ್ಕೆಗೊಂಡಿದ್ದಾರೆ. ಇವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಆಯ್ಕೆ ಮಾಡಿದ್ದಾರೆ. ಈ ಹಿಂದೆ ಇವರು ಸಿಂಡಿಕೇಟ್ ಹಾಗೂ ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ, ಕಾರ್ಯದರ್ಶಿ ಎಸ್.ಎಸ್. ಪಾಟೀಲ, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗರಾಜ ಚಪ್ಪರದಳ್ಳಿ ಹಾಗೂ ಉಪನ್ಯಾಸಕ ಸಿಬ್ಬಂದಿ ಅಭಿನಂದಿಸಿದ್ದಾರೆ.
ಮತದಾನ ಜಾಗೃತಿಗಾಗಿ ಬೀದಿ ನಾಟಕ
ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಾರ್ತಾ ಇಲಾಖೆಯಿಂದ ಮತದಾರರ ಜಾಗೃತಿಗಾಗಿ ನಮ್ಮ ಮತ ನಮ್ಮ ಹಕ್ಕು ಎಂಬ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ನಡೆಸಲಾಗುತ್ತಿದೆ.ರಾಣಿಬೆನ್ನೂರು ತಾಲೂಕು ಕಾಕೋಳ, ಹಲಗೇರಿ, ಕಮದೋಡ, ಕೋಡಿಹಾಳ, ಗೋಡಿಹಾಳ, ಕೋಣನತಲೆ, ಯಲಬಡಗಿ, ನಿಟ್ಟೂರುಗಳಲ್ಲಿ ಶುಕ್ರವಾರ ಬೀದಿ ನಾಟಕ ಪ್ರದರ್ಶಿಸಲಾಯಿತು. ಶನಿವಾರ ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿ, ನೇಶ್ವಿ ಗ್ರಾಮಗಳಲ್ಲಿ ಜರುಗಿದವು. ರಾಣಿಬೆನ್ನೂರು ತಾಲೂಕಿನ ಯಕಲಾಸಪುರ ಗ್ರಾಮದ ಜನನಿ ಜಾನಪದ ಕಲಾ ವೇದಿಕೆ ತಂಡದ ಪರಶುರಾಮ ಬಣಕಾರ ನೇತೃತ್ವದಲ್ಲಿ ಕಲಾವಿದರಾದ ಬಸವರಾಜ ಕೊಳಜಿ, ಚಂದ್ರಪ್ಪ ದೊಡ್ಡಮನಿ, ಗದಿಗೇಶ ಬಿಜ್ಜೂರ, ರಾಜು ಸುರ್ವೆ, ಸರೋಜಾ ಸಣಕಂಬಿ, ರಮೇಶ ನಾಯಕ, ಲಿಂಗರಾಜ ಕೊಳಜಿ ಬೀದಿನಾಟಕದಲ್ಲಿ ಅಭಿನಯಿಸಿದರು.
ರೆಡ್ಕ್ರಾಸ್ ಕಾರ್ಯ ಶ್ಲಾಘನೀಯ
ಹಾವೇರಿ: ಇಂದಿನ ದಿನಮಾನಗಳಲ್ಲಿ ನಡೆಯಬಾರದ ಘಟನೆಗಳು ಹೆಚ್ಚು ನಡೆಯುತ್ತಿವೆ. ರಸ್ತೆ ಅಪಘಾತ, ಅಗ್ನಿ ದುರಂತ, ಭೂಕಂಪ, ಪ್ರವಾಹ ಇತ್ಯಾದಿ ವಿಪತ್ತುಗಳು ಸಂಭವಿಸಿದಾಗ ಜನರ ಸಹಾಯಕ್ಕೆ ಮುಂದಾಗುವ ರೆಡ್ಕ್ರಾಸ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಗೂ ಕಂದಾಯ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯವಾದಿಗಳ ಸಂಘಕ್ಕೆ ಆಯ್ಕೆ
ಶಿಗ್ಗಾಂವಿ: ತಾಲೂಕು ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಜಿ. ಕೂಲಿ, ಕಾರ್ಯದರ್ಶಿಯಾಗಿ ಎಸ್.ಎಸ್. ಪೂಜಾರ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ಎಸ್.ಕೆ. ಅಕ್ಕಿ ಘೋಷಣೆ ಮಾಡಿದರು. ತಾಲೂಕು ನ್ಯಾಯವಾದಿಗಳ ಸಂಘದ 2014-2016 ಅವಧಿಯ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು. ಈ ಎರಡು ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು. ಉಪಾಧ್ಯಕ್ಷ ಬಿ.ಕೆ. ಮತ್ತಿಗಟ್ಟಿ, ಸಹಕಾರ್ಯದರ್ಶಿ ಎಸ್.ವಿ. ಕಟ್ಟಿ, ಖಜಾಂಚಿ ಸಿ.ಎಂ. ಹರಕುಣಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೆ.ಎನ್. ಹುತ್ತನಗೌಡ್ರ, ಎಂ.ಎಚ್. ಬೆಂಡಿಗೇರಿ, ಬಿ.ಎನ್. ಕೋಣನವರ, ಎಂ.ಎನ್. ಕ್ಯಾಲಕೊಂಡ, ಜಿ.ಎನ್. ಯಲಿಗಾರ, ಪಿ.ಐ. ಬಡಿಗೇರ, ಕುಮಾರಿ ಸಿ.ಎನ್. ಬಡ್ಡಿ ಆಯ್ಕೆಯಾದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರದರ್ಶನ ಕಲೆಗಳಲ್ಲಿ ನಾಟಕಕ್ಕೆ ಅಗ್ರಸ್ಥಾನ
ಶಿಗ್ಗಾಂವಿ: ದೃಶ್ಯ, ಶ್ರವ್ಯ, ಕ್ರಿಯೆ ಎಲ್ಲವನ್ನೂ ಒಳಗೊಂಡ ಸಂಕೀರ್ಣ ಪ್ರದರ್ಶನ ಕಲೆಗಳಲ್ಲಿ ನಾಟಕ ಅಗ್ರಸ್ಥಾನ ಹೊಂದಿದೆ ಎಂದು ಕಿರುತೆರೆ ನಟ ಎಂ.ಎಸ್. ಕೊಟ್ರೇಶ್ ಹೇಳಿದರು. ಪಟ್ಟಣದಲ್ಲಿ ಜರುಗಿದ ವಿಶ್ವರಂಗಭೂಮಿ ದಿನಾಚರಣೆ, ರಂಗಭೂಮಿ ಬಗ್ಗೆ ಉಪನ್ಯಾಸ, ಸಂವಾದಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಕೆ. ಕೊಟ್ರೇಶ ಬೆಳಗಲಿ ವಹಿಸಿದ್ದರು. ಸಂಘದ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ ಪ್ರಾಸ್ತಾವಿಕ ಮಾತನಾಡಿದರು. ಸಿ.ಡಿ. ಯತ್ನಳ್ಳಿ, ಎಸ್.ಎನ್. ಮುಗಳಿ, ಎಸ್.ಎಚ್. ಹೂಗಾರ, ಶೇಖಪ್ಪ ಹಂಪಣ್ಣವರ, ಸಿದ್ದೇಶ ಸಂದಿಹಳ್ಳಿ, ಶೇಖಣ್ಣ ಜೋಳದ, ಶಿವಾನಂದ ಹೊಸಮನಿ, ಪ್ರೊ.ಡಿ.ಎ. ಗೊಬ್ಬರಗುಂಪಿ, ಚಂದ್ರಶೇಖರ ಕಮಡೊಳ್ಳಿ, ಅಶೋಕ ಕುರುಬರ, ಶಂಕರ ಅರ್ಕಸಾಲಿ, ಗೋಪಾಲ ವೆಂಕಪ್ಪನವರ, ಶಂಕರ ಅಯ್ಯಣ್ಣವರ ಇದ್ದರು. ಬಸವರಾಜ ಶಿಗ್ಗಾಂವಿ ಸ್ವಾಗತಿಸಿದರು. ಹಜರೇಸಾಬ ನದಾಫ್ ವಂದಿಸಿದರು.
ಭಾಷಣ ಸ್ಪರ್ಧೆಯಲ್ಲಿ ಮತದಾನ ಜಾಗೃತಿ
ಹಾನಗಲ್ಲ: ನಗರದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಮತದಾನ ನಮ್ಮ ಹಕ್ಕು ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಬಿ.ಎಸ್. ರುದ್ರೇಶ್ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಹಾಗೂ ಭ್ರಷ್ಟಾಚಾರ ಮುಕ್ತ ದೇಶ ಕಟ್ಟಲು ಯುವಕರು ಸ್ವಾರ್ಥ ಸಾಧನೆ ಬದಿಗೊತ್ತಿ, ಉತ್ತಮ ನಾಯಕರನ್ನು ಆರಿಸಿ ತರುವ ಪಣ ತೊಡುವ ಮೂಲಕ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಸದಾಶಿವಪ್ಪ ಎನ್. ಮಾತನಾಡಿದರು. ಪ್ರಕಾಶ ಹುಲ್ಲೂರ, ಎಂ.ಬಿ. ನಾಯ್ಕ, ವಿಶ್ವನಾಥ ಬೊಂದಾಡೆ, ಆರ್. ದಿನೇಶ, ಮಹೇಶ ಅಕ್ಕಿವಳ್ಳಿ, ಜಿ.ಟಿ. ಜಿತೇಂದ್ರ, ಜಿ.ವಿ. ಪ್ರಕಾಶ ಇದ್ದರು. ಆಶಾ ಮಾಂಗ್ಲೇನವರ ಸ್ವಾಗತಿಸಿದರು. ಸೌಮ್ಯಾ ಆಚಾರ್ಯ ನಿರೂಪಿಸಿದರು. ಜಗದೀಶಪ್ಪ ವಂದಿಸಿದರು.
ಉಂಡ ಮನೆಗೆ ಕನ್ನ: ಮಹಿಳೆ ಬಂಧನ
ಕುಮಟಾ: ಕೆಲ ದಿನಗಳ ಹಿಂದೆ ಧಾರೇಶ್ವರದ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದು, ಬಂಗಾರದ ಮಾಂಗಲ್ಯ ಸರ, ಎರಡು ಬಳೆ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಕೆಂಚನಮನೆ ಆಸರಕೆರೆ ಗ್ರಾಮದ ನಿವಾಸಿ ಶ್ವೇತಾ ನಾಯ್ಕ (30) ಹಾಗೂ ಕಳ್ಳತನಕ್ಕೆ ಸಹಕರಿಸಿದ ಹೊನ್ನಾವರ ತಾಲೂಕಿನ ಹಾಡಗೇರಿ ನಿವಾಸಿ ಮಾರುತಿ ಸುಬ್ರಾಯ ನಾಯ್ಕ (29) ಅವರನ್ನು ಬಂಧಿಸಲಾಗಿದೆ. ಸಿಪಿಐ ಕೆ. ಶ್ರೀಕಾಂತ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಕುಮಾರ ಹಾಗೂ ಅಪರಾಧ ವಿಭಾಗ ಸಿಬ್ಬಂದಿ ಗಂಗಾಧರ ಹೊಂಗಲ್ ಮತ್ತು ಪ್ರದೀಪ ರೇವಣಕರ್ ಕಾರ್ಯಾಚರಣೆ ನಡೆಸಿದರು.