ವಸತಿ ರಹಿತ ಶಾಲೆ ಆರಂಭ
ರಾಣಿಬೆನ್ನೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಉರ್ದು ಶಾಲೆಗಳ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಮಾರುತಿ ನಗರದ ಉರ್ದು ಶಾಲೆ ಸಂಯುಕ್ತಾಶ್ರಯದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ 2013-14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದಕ್ಕಾಗಿ ಮಾರುತಿ ನಗರದ ಉರ್ದು ಶಾಲೆಯಲ್ಲಿ ಏರ್ಪಡಿಸಿದ್ದ ವಸತಿ ರಹಿತ ಶಾಲೆಗೆ ಡಿವೈಪಿಸಿ ಎಚ್.ಎಂ. ಖಾನ್ ಚಾಲನೆ ನೀಡಿದರು. ಕಾರ್ಯಕ್ರಮದ ಕುರಿತು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಬಿ. ಜಕ್ಕರೆಡ್ಡಿ ಮಾತನಾಡಿದರು. ಎಪಿಸಿಓ ಎಂ.ಎಸ್. ಗುಂಡಪಲ್ಲಿ, ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ್ ರಫೀಕ್ ಮುಲ್ಲಾ, ಸದಸ್ಯರಾದ ನಿಸ್ಸಾರ್ ಅಹ್ಮದ್ ಕೊತ್ವಾಲ, ದಾದಾಪೀರ್ ಹರಪನಹಳ್ಳಿ, ಬಿಆರ್‌ಪಿಗಳಾದ ಎಂ.ಎಂ. ಮಾಗನೂರು, ಎ.ಎಂ. ಬಸವರಾಜ, ಆರ್.ಸಿ. ಹಳೇಗೌಡ್ರ, ಎ.ಎಂ. ಬಡಗಿ, ಎಂ.ಎ. ತಾಶಾವಾಲೆ, ಉರ್ದು ಕ್ಲಸ್ಟರ್ ಸಿಆರ್‌ಪಿ ವೈ.ಐ. ಹರಗೋಲ ಮಾತನಾಡಿದರು.
ಆಶ್ರಮದಿಂದ ಬೇಸಿಗೆ ಶಿಬಿರ
ಹುಬ್ಬಳ್ಳಿ: ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಮೇ 5ರಿಂದ 14ರ ವರೆಗೆ ಮಕ್ಕಳಿಗೆ ವಿವೇಕ ವಸಂತ ಉಚಿತ ಬೇಸಿಗೆ ಶಿಬಿರವನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಬಳಿ ಇರುವ ಪಂಚವಟಿಯಲ್ಲಿ ಆಯೋಜಿಸಲಾಗಿದೆ ಎಂದು ಸ್ವಾಮಿ ರಘುವೀರಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮನಸ್ಸಿನ ಏಕಾಗ್ರತೆ ಸಾಧಿಸಿ ಜೀವನ ಭವ್ಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು. ಆದರೆ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಚಾರಿತ್ರ್ಯ, ಬಲ, ಸೇವಾ ತತ್ಪರತೆ ಮತ್ತು ಇಚ್ಛಾಶಕ್ತಿಯಂತಹ ಸದ್ಗುಣಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಮಕ್ಕಳಲ್ಲಿ ಚಾರಿತ್ರ್ಯ ಬೆಳೆಸುವ ನಿಟ್ಟಿನಲ್ಲಿ ವಿವೇಕ ವಸಂತ ಹೆಸರಿನಲ್ಲಿ ಹದಿನೈದು ದಿನಗಳ ಶಿಬಿರ ಆಯೋಜಿಸಲಾಗಿದೆ. ಶಿಬಿರಕ್ಕೆ ಹೆಸರನ್ನು ನೋಂದಾಯಿಸಲು ಮೇ 2 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ 94483 94822 ಸಂಪರ್ಕಿಸಬಹುದು.