ಸಿಇಟಿ ಪರೀಕ್ಷೆ ಶಾಂತ
ಹಾವೇರಿ: ವೃತ್ತಿ ಶಿಕ್ಷಣ (ಸಿಇಟಿ) ಸಾಮಾನ್ಯ ಪ್ರವೇಶ ಪರೀಕ್ಷೆ ಗುರುವಾರ ನಗರದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು.
ಬೆಳಗಿನ ಅವಧಿಯಲ್ಲಿ ಜೀವಶಾಸ್ತ್ರ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಗಣಿತ ವಿಷಯದ ಪರೀಕ್ಷೆ ನಡೆದವು. ನಗರದ ಜಿ.ಎಚ್.ಪದವಿಪೂರ್ವ ಕಾಲೇಜನಲ್ಲಿ 544 ವಿದ್ಯಾರ್ಥಿಗಳು, ಎಸ್.ಜೆ.ಎಂ. ಪದವಿಪೂರ್ವ ಕಾಲೇಜಿನಲ್ಲಿ 432 ವಿದ್ಯಾರ್ಥಿಗಳು ಹಾಗೂ ಹುಕ್ಕೇರಿಮಠ ಎಸ್.ಎಸ್. ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ 432 ವಿದ್ಯಾರ್ಥಿಗಳು ಸೇರಿ ಒಟ್ಟು 1408 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಿದರು.
ವ್ಯವಸ್ಥಿತವಾಗಿ ಪರೀಕ್ಷೆ ನಡೆಯಲು 16 ವಿದ್ಯಾರ್ಥಿಗಳಿಗೆ ಒಬ್ಬರಂತೆ ಒಟ್ಟು 88 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ಮತ್ತು ಶಾಂತಿಪಾಲನೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿತ್ತು.
ಹೊಸಮಠದ ಎಸ್.ಜೆ.ಎಂ.ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ, ಹುಕ್ಕೇರಿಮಠ ಮಹಿಳಾ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಪಂ ಉಪ ಕಾರ್ಯದರ್ಶಿ ಹಾಗೂ ಜಿ.ಎಚ್.ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹಾವೇರಿ ಉಪ ವಿಭಾಗಾಧಿಕಾರಿಯನ್ನು ವೀಕ್ಷಕರೆಂದು ನೇಮಿಸಲಾಗಿತ್ತು. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಶುಕ್ರವಾರ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿವೆ ಎಂದು ವೃತ್ತಿ ಶಿಕ್ಷಣ ಹಾಗೂ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಿನ್ನಿಕಟ್ಟಿ ತಿಳಿಸಿದರು.