ಸುಪ್ರೀಂ ಆದೇಶ: ಕಾರ್ಮಿಕರಿಗೆ ಅನುಕೂಲ
ಹಾನಗಲ್ಲ: ವರ್ಷದ 240 ದಿನ ಕಾರ್ಯನಿರ್ವಹಿಸಿದ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದ ದೇಶದ ಕೋಟ್ಯಂತರ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ಹಾನಗಲ್ಲ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಂ. ರಾಮಚಂದ್ರ ಹೇಳಿದರು.
ಗುರುವಾರ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಾನಗಲ್ಲಿನ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಕಾನೂನುಗಳ ತಿಳಿವಳಿಕೆಯು ಶ್ರಮಿಕ ವರ್ಗದವರಲ್ಲಿ ಮೂಡಿ ಬರಬೇಕು. ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕಾರ್ಮಿಕರು ಹೆಚ್ಚಾಗಿ ಅಸಂಘಟಿತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅತ್ಯಂತ ಕ್ರಿಯಾಶೀಲವಾಗಿದ್ದ ಕಾರ್ಮಿಕ ಸಂಘಟನೆಗಳು ಈಗ ಅಷ್ಟೊಂದು ಪ್ರಬಲವಾಗಿಲ್ಲ. ಕಾರ್ಮಿಕರ ಸಂಘಟಿತ ಚಟುವಟಿಕೆಗಳಿಗೆ ಪೂರಕವಾಗಿ ಹಲವಾರು ಕಾನೂನು ಜಾರಿಯಲ್ಲಿದ್ದು, ಅವುಗಳ ಸಮರ್ಪಕ ಬಳಕೆಯಾಗಬೇಕು ಎಂದರು. ಕಾರ್ಮಿಕರ ಹಿತರಕ್ಷಣೆ ಕಾಯ್ದೆ ಕುರಿತು ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಕೆ.ಬಿ. ದೊಡ್ಡಮನಿ, ಇಂದಿನ ಜಾಗತೀಕರಣದ ಪ್ರಭಾವದಿಂದ ಎಲ್ಲ ಕ್ಷೇತ್ರಗಳಲ್ಲಿ ಶ್ರಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಶ್ರಮಿಕರ ಶ್ರಮವನ್ನು ಶೋಷಣೆ ಮಾಡುವ ಮೂಲಕ ಬಂಡವಾಳಶಾಹಿಗಳು ಮಾಡಿಕೊಳ್ಳುವ ಲಾಭವನ್ನು ನಿಯಂತ್ರಿಸಲು ಬಳಕೆಯಲ್ಲಿರುವ ಕಾನೂನುಗಳ ಅರಿವು ಕಾರ್ಮಿಕರಲ್ಲಿ ಬೆಳೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾನಗಲ್ಲ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿ ವಡೆಯರ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ನಿಟ್ಟಿನಲ್ಲಿ ಕಾರ್ಮಿಕರು ಸಂಘಟಿತರಾಬೇಕು. ಅಲ್ಲದೆ, ಕಾರ್ಮಿಕರ ಅಭ್ಯುದಯಕ್ಕಾಗಿ ಚಾಲನೆಯಲ್ಲಿರುವ ಕಾನೂನುಗಳ ಅರಿವು ಮತ್ತು ಸದ್ಬಳಕೆ ಬೇಕಾಗಿದೆ ಎಂದರು.
ಹಾನಗಲ್ಲ ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವಸ್ವಾಮಿ, ಕಾರ್ಮಿಕರಿಗೆ ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳಿಗಾಗಿ ಸಂಘಟನೆ ಅಗತ್ಯವಾಗಿದೆ. ಆದರೆ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಕಾಣುವಷ್ಟು ಕಾರ್ಮಿಕರ ಸಂಘಟನೆಗಳು ಈ ಭಾಗದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯವಾದಿ ಎಸ್.ಎಂ. ಕೊತಂಬರಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ ಉಪಸ್ಥಿತರಿದ್ದರು. ಎಸ್.ಬಿ. ಗೌರಿ ಪ್ರಾರ್ಥಿಸಿದರು. ವೀರಣ್ಣ ನಡುವಿನಮನಿ ಸ್ವಾಗತಿಸಿದರು. ವಿ.ಆರ್. ಪಾಟೀಲ ನಿರ್ವಹಿಸಿದರು.