ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾರ್ಮಿಕ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ

Rashmi Kasaragodu
Updated On : 4 May 2014, 1:01 am

ಸವಣೂರು: ಸುಂದರ ಗುಡಿ, ಚರ್ಚ್, ಮಸೀದಿ ನಿರ್ಮಾಣದ ಹಿಂದೆ ಕಾರ್ಮಿಕರ ಶ್ರಮವಿರುತ್ತದೆ. ಅಂತಹ ಕಾರ್ಮಿಕರಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳ ಮುಖಾಂತರ ಕೈಗೊಳ್ಳುವುದು ಅವಶ್ಯಕ ಎಂದು ವರ್ತಕ ಮಹೇಶ ಸಾಲಿಮಠ ಹೇಳಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಭೋವಿ ವಡ್ಡರ್ ಓಣಿಯಲ್ಲಿ ಗುರುವಾರ ನಡೆದ ಗುರು ಸಿದ್ಧರಾಮೇಶ್ವರ ಕಟ್ಟಡ ಕಟ್ಟುವ ಹಾಗೂ ಇತರ ನಿರ್ಮಾಣದಲ್ಲಿ ನಿರತವಾಗಿರುವ ಕಾರ್ಮಿಕರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಕಾರ್ಮಿಕರ ಸಂಘಗಳು, ಸದಸ್ಯರಿಗೆ ವಿಮಾ ಯೋಜನೆ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳು ಹಾಗೂ ವೃದ್ಧಾಪ್ಯ ಪಿಂಚಣಿಗಳಂತಹ ಸರ್ಕಾರಿ ಯೋಜನೆಗಳನ್ನು ಪಡೆಯುವಂತೆ ಮಾಹಿತಿ ನೀಡಬೇಕು. ಪ್ರತಿ ಕಾರ್ಮಿಕರು ಎಷ್ಟೇ ಕಷ್ಟದಲ್ಲಿ ಇದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ಅವರು ಗುರು ಸಿದ್ಧರಾಮೇಶ್ವರ ಕಟ್ಟಡ ಕಟ್ಟುವ ಹಾಗೂ ಇತರ ನಿರ್ಮಾಣದಲ್ಲಿ ನಿರತವಾಗಿರುವ ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಒಗ್ಗಟಾಗಿ ಇಂತಹ ಸಂಘಗಳ ಮೂಲಕ ಹೋರಾಟ ಕೈಗೊಂಡಲ್ಲಿ ಮಾತ್ರ ಇಂದಿನ ದಿನಮಾನಗಳಲ್ಲಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಧ್ಯ. ಆದ್ದರಿಂದ ಯುವ ಕಾರ್ಮಿಕರು ಜಾಗೃತರಾಬೇಕು. ತಮ್ಮ ಕಾಯಕದಿಂದ ಬರುವ ಆದಾಯವನ್ನು ದುಶ್ಚಟಗಳಿಗೆ ಬಳಕೆ ಮಾಡದೇ ತಮ್ಮ ಕುಟುಂಬ ನಿರ್ವಹಣೆ ಹಾಗೂ ದಾಸೋಹ ಸೇವೆಗಳಿಗೆ ಮಾತ್ರ ಸೀಮಿತಗೊಳಿಸಿದಲ್ಲಿ ಶ್ರಮದ ಕಾರ್ಯಕ್ಕೆ ನಿಜವಾದ ಅರ್ಥದೊರೆಯಲಿದೆ ಎಂದರು. ಸಂಘದ ಅಧ್ಯಕ್ಷ ಆನಂದ ಬಂಡಿವಡ್ಡರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುರುಗಯ್ಯ ಸಾಲಿಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೋವಿ ವಡ್ಡರ್ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ವಡ್ಡರ್, ಪುರಸಭೆ ಸದಸ್ಯ ಮಂಜುನಾಥ ಉಪ್ಪಿನ ಇತರರಿದ್ದರು.



ನಾಳೆ ಪಟ್ಟಾಧಿಕಾರ
ಹಿರೇಕೆರೂರು: ಹಾವೇರಿ ಜಿಲ್ಲಾ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದ ಶ್ರೀ ಶಿವಾಲಿ ಬಸವೇಶ್ವರ ಸ್ವಾಮಿಗಳ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮಾರಂಭ ಮೇ 5ರಂದು ಜರುಗಲಿದೆ ಅಂದು ಬೆಳಗ್ಗೆ 6ಕ್ಕೆ ಪಟ್ಟಾಧಿಕಾರ ಮಹೋತ್ಸವ, ಧ್ವಜಾರೋಹಣ ನೆರವೇರಲಿದ್ದು ಕಡೆ ನಂದಿಹಳ್ಳಿಯ ಹಂಪೇಶ್ವರ ಮಠಾಧೀಶ ಶಿವಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.  ಮಧ್ಯಾಹ್ನ 12 ಗಂಟೆಗೆ ಜನಜಾಗೃತಿ ಧರ್ಮ ಸಭೆ ನಡೆಯಲಿದ್ದು ಮಡ್ಲೂರನ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಾನಗಲ್ಲಿನ ಶಂಕರಾನಂದ ಸ್ವಾಮೀಜಿ, ಹಿರೇಮಾಗಡಿಯ ಶಿವಮೂರ್ತಿ ಮುರಘರಾಜೇಂದ್ರ ಸ್ವಾಮೀಜಿ, ಗದಗಯ್ಯ ಸ್ವಾಮೀಜಿ, ಪ್ರವೀಣ ಸ್ವಾಮಿ ಹಿರೇಮಠ ಉಪಸ್ಥಿತರಿರಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ. ಜಿ.ವಿ. ತೊಗರ್ಸಿ, ಶಾಸಕ ಯು.ಬಿ. ಬಣಕಾರ, ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಬಿ.ಸಿ. ಪಾಟೀಲ, ಬಿ.ಎಚ್. ಬನ್ನಿಕೋಡ, ಡಿ.ಎಂ. ಸಾಲಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯ ಸಲೀಂ ಅಲಿ, ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.
ಇಂದು ಜಯಂತ್ಯುತ್ಸವ
ಹಾನಗಲ್ಲ: ಜಗದ್ಗುರು ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಶಂಕರ ಸೇವಾ ಸಮಿತಿ ಹಾಗೂ ಬಾಹ್ಮಣ ಮಹಾಸಭಾದ ಆಶ್ರಯದಲ್ಲಿ ಪಟ್ಟಣದ ಶ್ರೀಶಂಕರ ಮಠದಲ್ಲಿ ಮೇ 4ರಂದು ಆಚರಿಸಲಾಗುತ್ತಿದೆ. ಬೆಳಗ್ಗೆ 8.30ಕ್ಕೆ ಶ್ರೀ ಶಂಕರರ ವಿಗ್ರಹಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನಡೆಯಲಿದೆ. ಸಂಜೆ 4ಕ್ಕೆ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಯು ಶ್ರೀದತ್ತ ಮಂದಿರದಿಂದ ಹೊರಟು ತಾರಕೇಶ್ವರ ದೇವಸ್ಥಾನದ ಮೂಲಕ ಹಾಯ್ದು ಶಂಕರಮಠ ತಲುಪುವುದು. ಸಂಜೆ 6ಕ್ಕೆ ವಿವಿಧ ಭಜನಾ ಮಂಡಳಿಯ ಮಹಿಳೆಯರಿಂದ ಸಾಮೂಹಿಕ ಸೌಂದರ್ಯ ಲಹರಿ ಪಠಣ, ಅಷ್ಟಾವಧಾನ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಲಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಪ್ರ ಬಾಂಧವರು, ಋತ್ವಿಜರು, ಹಿರಿಯರು, ಮಹಿಳೆಯರು, ಯುವಕರು ಸಕ್ರಿಯವಾಗಿ ಪಾಲ್ಗೊಂಡು ಶ್ರೀ ಶಂಕರರ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
ಪುಟ್ಟವ್ವ ಸುಣಗಾರ ನಿಧನ
ಹಾನಗಲ್ಲ: ಪಟ್ಟಣದ ಸುಣಗಾರ ಬಡಾವಣೆಯ ಪುಟ್ಟವ್ವ ಫಕ್ಕೀರಪ್ಪ ಸುಣಗಾರ (60) ಶನಿವಾರ ಮಧ್ಯಾಹ್ನ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement