ಕುಡಿವ ನೀರಿನ ಸಮಸ್ಯೆ ಬಗೆಹರಿಸಿ: ಮನವಿ
ಹಾವೇರಿ: 45 ದಿನಗಳಿಂದ ತುಂಗಭದ್ರಾ ಹಾಗೂ ವರದಾ ನದಿಗಳ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ನಗರದ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ. ಇದಕ್ಕೆ ನಗರಸಭೆ ಆಡಳಿತ ಮಂಡಳಿಯ ನಿರ್ಲಕ್ಷ್ಯತನವೇ ಕಾರಣವಾಗಿದ್ದು, ಸರಿಪಡಿಸುವಂತೆ ನಗರಸಭೆ ಬಿಜೆಪಿ ಸದಸ್ಯರು, ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಎಂ. ಮಂಜುನಾಥ ನಾಯ್ಕ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲು ಕಂಚಾರಗಟ್ಟಿ ಹತ್ತಿರವಿರುವ ಜಾಕ್ವೆಲ್ನಲ್ಲಿ ಎರಡು ನೀರೆತ್ತುವ ಯಂತ್ರಗಳಿವೆ. ಪ್ರಸಕ್ತ ಈ ಎರಡು ಯಂತ್ರಗಳು ಕೆಟ್ಟಿವೆ. ನಗರಸಭೆ ಸಿಬ್ಬಂದಿ ಅವುಗಳನ್ನು ದುರಸ್ತಿಗೊಳಿಸಿಲ್ಲ ಎಂದರು. ಗುಡ್ಡನಗೌಡ ಅಂದಾನಿಗೌಡ್ರ, ಸುರೇಶ ದೊಡ್ಡಮನಿ, ಹನುಮಂತನಾಯ್ಕ ಬದಾಮಿ ಇತರರಿದ್ದರು.
ಶ್ರಮಸಂಸ್ಕೃತಿ ಬಸವಣ್ಣನ ಕೊಡುಗೆ: ಬಂಡಿವಡ್ಡರ್
ಹಾನಗಲ್ಲ: ಕಾಯಕ, ಶ್ರಮಸಂಸ್ಕೃತಿ ಸಂದೇಶ ನೀಡಿದ ಬಸವಣ್ಣ, ಎಲ್ಲ ವರ್ಗಗಳೂ ಬದುಕಿಗೆ ಅಳವಡಿಸಿಕೊಳ್ಳುವಂಥ ವಚನ ಸಾಹಿತ್ಯ ನೀಡಿದ ಮಹಾತ್ಮರು ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ್ ಹೇಳಿದರು. ಅವರು ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ತಹಸೀಲ್ದಾರ ಎನ್.ಟಿ. ಧರ್ಮೋಜಿರಾವ್, ತಾಪಂ ಇಒ ಎಸ್.ಬಿ. ಲಕ್ಷ್ಮೇಶ್ವರ, ವ್ಯವಸ್ಥಾಪಕ ಎಸ್.ಬಿ. ಗಾಯಕವಾಡ, ಎನ್.ಎಂ. ಪೂಜಾರ, ಉಮೇಶ ಸವಣೂರ, ಎಸ್.ಆರ್. ಸಿದ್ಧನಗೌಡ್ರ, ಎಂ.ಎಸ್. ಶೆಟ್ಟರ್, ಸಂಜೀವರೆಡ್ಡಿ ಬತ್ತೇರ, ಪಿ.ಬಿ. ಪಾತ್ರೋಟಿ, ಸಿ.ಸಿ. ಕದಂ ಇತರರಿದ್ದರು.