ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
ಹಾನಗಲ್ಲ: ಇಂದಿನ ಆಧುನಿಕ ಯುಗದಲ್ಲಿ ಬಡ ಹಾಗೂ ಮಧ್ಯಮ ವರ್ಗಗಳಿಗೆ ಸೇರಿದ ಜನತೆ ಜೀವನ ನಡೆಸುವುದೇ ಕಷ್ಟಸಾಧ್ಯವಾಗಿದೆ. ಇಂಥ ಅನವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಮೂಹಿಕ ವಿವಾಹ ಹೆಚ್ಚು ಸಹಕಾರಿಯಾಗಿದೆ ಎಂದು ಜಿಪಂ ಸದಸ್ಯ ಬಸವರಾಜ ಹಾದಿಮನಿ ನುಡಿದರು. ತಾಲೂಕಿನ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಮಾತನಾಡಿದರು. ಶಿವಪುತ್ರಪ್ಪ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ ತಳವಾರ ಶಿವಲಿಂಗಪ್ಪ ತಲ್ಲೂರ, ಗ್ರಾಪಂ ಉಪಾಧ್ಯಕ್ಷ ಸುಭಾಷ ಗಡ್ಡದವರ, ಚಿದಾನಂದ ಬಾರ್ಕಿ, ಪಿಡಿಒ ಪರಶುರಾಮ ಅಂಬಿಗೇರ, ಜಯಣ್ಣ ದ್ಯಾವಣ್ಣನವರ, ಜಯಣ್ಣ ಹೊನಗೊಂಡ್ರ ಇದ್ದರು.
ದೇಸಿ ಸಂಸ್ಕೃತಿ ಉಳಿಸಿ, ಬೆಳೆಸಿ: ದಿಂಗಾಲೇಶ್ವರ ಶ್ರೀ
ಶಿಗ್ಗಾಂವಿ: ದೇಸಿ ಸಂಸ್ಕೃತಿಯಿಂದ ಹೆಣ್ಣು ಮಕ್ಕಳು ದೂರವಾಗುತ್ತಿದ್ದು, ಪ್ಯಾಂಟ್, ಶರ್ಟ್ಗಳಿಗೆ ಮಾರು ಹೋಗುತ್ತಿದ್ದು ನಿತ್ಯದ ಉಡುಗೆ, ತೊಡುಗೆ ಬದಲಾಗಿ ಆಧುನಿಕ ಆಡಂಬರಕ್ಕೆ ಮಾರು ಹೋಗುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮಿಗಳು ವಿಷಾದಿಸಿದರು. ತಾಲೂಕಿನ ಬನ್ನೂರ ಗ್ರಾಮದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-ವರರಿಗೆ ಆಶೀರ್ವದಿಸಿ ಮಾತನಾಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಎನ್.ಸಿ. ಪಾಟೀಲ, ಬಂಕಾಪುರ ಅರಳಲೆ ಹಿರೇಮಠದ ರೇವಣಸಿದ್ದೇಶ್ವರ ಶ್ರೀಗಳು, ಶಿವಲಿಂಗೇಶ್ವರ ಶಿವಾಚಾರ್ಯರು, ವಿರಕ್ತ ಮಠದ ಸಂಗನಬಸವ ಶ್ರೀಗಳು, ವರೂರು ಜೈನ ಶ್ರೀಗಳು, ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು ಇದ್ದರು.