ಬಡ ವಿದ್ಯಾರ್ಥಿಗಳಿಗೆ ವರದಾನವಾದ ಕಾಲೇಜು
ರಾಣಿಬೆನ್ನೂರು: ಮೂಲ ಸೌಲಭ್ಯಗಳಿಂದ ವಂಚಿತಗೊಂಡ ಕಾಲೇಜು ಎಂದು ಆರೋಪಗಳಿಂದ ಕೂಡಿರುವ ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೀಗ ಉತ್ತಮ ಶಿಕ್ಷಣ, ಸೌಲಭ್ಯಗಳು ಕಾಣಸಿಗುತ್ತಿದ್ದು, ಜಿಲ್ಲೆಯ ವಿವಿಧ ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಪದವಿ ಶಿಕ್ಷಣ ನೀಡುವಲ್ಲಿ ಮುಂದಾಗಿದೆ.
ಕಳೆದ 6 ವರ್ಷಗಳ ಹಿಂದೆ ಪ್ರಾರಂಭಗೊಂಡ ಕಾಲೇಜಿನಲ್ಲಿ ಯಾವುದೇ ಸೌಲಭ್ಯಗಳಿಲ್ಲ ಎಂದು ಅನೇಕ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಂಘಟನೆಗಳು ಆರೋಪಿಸಿದ್ದವು. ಈ ಆರೋಪಗಳಿಗೆ ಉತ್ತರಿಸಲು ಕಾಲೇಜು ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡಿದ್ದು, ಈಗ ವಿವಿಧ ತಾಲೂಕುಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಪ್ರತಿವರ್ಷ ಉತ್ತಮ ಫಲಿತಾಂಶ ಸಹ ಕಾಣುತ್ತಿದೆ.
26 ಗ್ರಾಮಗಳ ಮಕ್ಕಳಿಗೆ ವರದಾನ: ರಾಣಿಬೆನ್ನೂರು, ಬ್ಯಾಡಗಿ ಹಾಗೂ ಹಿರೇಕೆರೂರು ತಾಲೂಕಿನ ವ್ಯಾಪ್ತಿಗೊಳಪಟ್ಟ ಸುಮಾರು 26ಕ್ಕೂ ಅಧಿಕ ಗ್ರಾಮಗಳ ಬಡವರ, ರೈತರ ಮತ್ತು ಕೂಲಿಕಾರ್ಮಿಕರ ಮಕ್ಕಳು, ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಹಾಗೂ ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಪರಿತಪಿಸುತ್ತಿದ್ದ ಕಷ್ಟ ಅರ್ಥೈಸಿಕೊಂಡ ಸುಣಕಲ್ಲಬಿದರಿ ಗ್ರಾಮದ ಅರಳಿ ಮನೆತನದ ಹಿರಿಯರಲ್ಲೊಬ್ಬರಾದ ಸಿದ್ಧಲಿಂಗಪ್ಪ ಬಸಪ್ಪ ಅರಳಿ ಹಾಗೂ ಬಂಧುಗಳು ಪದವಿ ಕಾಲೇಜು ಕಟ್ಟಡ ನಿರ್ಮಿಸಲು ತಮ್ಮ ಕೃಷಿ ಭೂಮಿ ನೀಡಿದ್ದ ಕಾರಣ, ಕಳೆದ 6 ವರ್ಷಗಳ ಹಿಂದೆ ಪ್ರಾರಂಭಗೊಂಡ ಪದವಿ ಕಾಲೇಜಿನಲ್ಲಿ ಇಂದು 3 ತಾಲೂಕಿನ ಸುಮಾರು 26 ಗ್ರಾಮಗಳ ಸಾವಿರಾರು ಬಡವರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ರಾಣಿಬೆನ್ನೂರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಈ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಪದವಿ ಶಿಕ್ಷಣ ಇಲಾಖೆ ವಿವಿಯ ಧನ ಸಹಾಯ ಆಯೋಗದಿಂದ (ಯುಜಿಸಿ) ಸುಮಾರು ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸುತ್ತಿದೆ.
ಕಾಲೇಜಿಗೆ ಬೋಧಕೇತರ ಸಿಬ್ಬಂದಿ ನೇಮಿಸಿಕೊಳ್ಳದಿರುವ ಕಾರಣ ಕೆಲ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಗಳಿಗೆ ಸಹಾಯಕ್ಕಾಗಿ ಪತ್ರ ಬರೆದಿದ್ದು, ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭದಲ್ಲಿ ಕಾಲೇಜಿನ ಆವರಣದಲ್ಲಿ ಗಿಡಮರ ನೆಟ್ಟು ವನಮಹೋತ್ಸವ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಾಲೇಜಿನ ಆವರಣದಲ್ಲಿ ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವುದಕ್ಕಾಗಿ ಬೋರ್ವೆಲ್ ಸಮೀಪ ಇಂಗು ಗುಂಡಿ ನಿರ್ಮಿಸುವ ಜೊತೆಗೆ ವಿದ್ಯಾರ್ಥಿಗಳ ಮತ್ತು ನೌಕರರ ವಾಹನ ನಿಲುಗಡೆಗಾಗಿ ಶೆಡ್ ನಿರ್ಮಿಸಲು ಕಾರ್ಯಾರಂಭಿಸುತ್ತೇವೆ. ನಮ್ಮ ಕಾಲೇಜಿನಲ್ಲಿ ಉತ್ತಮ ಬೋಧಕ ಸಿಬ್ಬಂದಿಗಳಿರುವ ಕಾರಣ ಪ್ರತಿ ವರ್ಷ ಶೇ. 90ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಡಾ. ರಮೇಶ ರಾಠೋಡ, ಎನ್ಎಸ್ಎಸ್ ಅಧಿಕಾರಿ ಡಾ.ರವಿ. ಎನ್ ಸಂತಸದ ಮಾತುಗಳನ್ನಾಡಿದರು.
ಸಾಬ್ಜನ ಇಟಗಿ