ಚರಂಡಿ ನೀರಿನ ಸಮಸ್ಯೆ ಬಗೆಹರಿಸಿ
ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಮುಖ್ಯರಸ್ತೆ ಬಳಿ ಚರಂಡಿ ನೀರು ಸಂಗ್ರಹಗೊಂಡು ಹೊಂಡವಾಗಿ ಪರಿಣಮಿಸಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಕೂಡಲೇ ಸಂಗ್ರಹವಾದ ಚರಂಡಿ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಚರಂಡಿ ನೀರು ಜತೆಗೆ ಈಚೆಗೆ ಸುರಿದ ಮಳೆ ನೀರು ಸೇರಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಜತೆಗೆ ಸುತ್ತಲಿನ ಬಡಾವಣೆಗಳು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಇದರಿಂದ ಚಿಕ್ಕ ಮಕ್ಕಳು ಹಾಗೂ ವೃದ್ದರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ಕೆಲ ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ನಿರ್ಮಾಣವಾಗಿರುವ ಕೊಳಚೆ ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಕೆಲವರು ರೋಗ ಪೀಡಿತರಾಗಿ ಬಳಲುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ಕುಂಭಕೋಣ ನಿದ್ರೆಗೆ ಜಾರಿದೆ ಎಂದು ದೂರಿದರು. ಗ್ರಾಮದಲ್ಲಿ ಎಲ್ಲೆಂದರಲ್ಲಿ ಅನೈರ್ಮಲ್ಯ, ಅಸುಚಿತ್ವ ತಾಂಡಾವಾಡುತ್ತಿದೆ. ನೈರ್ಮಲ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಿವಾಸಿಗಳ ನರಕಯಾತನೆ ಗೋಳು ಯಾರೂ ಕೇಳುರಿಲ್ಲದಂತಾಗಿದೆ. ತೆಗ್ಗು ದಿಣ್ಣೆಗಳಿಂದ ಕೂಡಿರುವ ಗ್ರಾಮ ಪ್ರವೇಶಿಸುವ ಮುಖ್ಯರಸ್ತೆ ಚರಂಡಿ ಕೊಳಚೆ ಹರಿಯುವ ಗಟಾರಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ಸಂಚರಿಸದ ದುಸ್ಥಿತಿ ನಿರ್ಮಣವಾದೆ. ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ ಎಂದು ಅಪಾದಿಸಿದರು.
ಸ್ಥಳೀಯ ಆಡಳಿತಕ್ಕೆ ಮನವಿ ಮಾಡಲಾಗಿದೆ. ಜತೆಗೆ ಹಲವಾರು ಬಾರಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರೂ ಗ್ರಾಮಸ್ಥರ ಗೋಳಿಗೆ ಸ್ಪಂದನೆ ಸಿಕ್ಕಿಲ್ಲ. ಈ ಕೂಡಲೇ ಹೊಂಡವಾಗಿ ಪರಿಣಮಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲು ಮುಂದಾಗದಿದ್ದಲ್ಲಿ ಜಿಲ್ಲಾಡಳಿತ ಮುಂದೆ ಸತ್ಯಾಗ್ರಹ ಕೈಗೊಂಡು ಪ್ರತಿಭಟಿಸುತ್ತೆವೆ ಎಂದು ಮಲ್ಲಪ್ಪ ಕಾತರಾಳ, ಸಕ್ರಪ್ಪ ಹಾದಿಮನಿ, ಕಳಕೇಶ ಉಕ್ಕಿಸಲ, ಗ್ರಾಪಂ ಸದಸ್ಯ ಶಿವಕುಮಾರ ಜಾಧವ್, ನಾರಾಯಣಪ್ಪ ರಾಠೋಡ, ಮೈಲಾರಪ್ಪ ಕಾತರಾಳ, ಪಡಿಯಪ್ಪ ಚವ್ಹಾಣ, ಶಾವಮ್ಮ ಕಾತರಾಳ, ದೇವಕ್ಕ ಚವ್ಹಾಣ ಯಲ್ಲವ್ವ ಕೊಪ್ಪದ, ಮುದಕಮ್ಮ ಮಾಟರಂಗಿ ಎಚ್ಚರಿಸಿದ್ದಾರೆ.