ಟೀಕೆಯನ್ನು ನಿಲ್ಲಿಸಿ,ಅಭಿವೃದ್ಧಿಗೆ ಶ್ರಮಿಸಿ
ಕನ್ನಡಪ್ರಭವಾರ್ತೆ, ಹಾವೇರಿ, ಮೇ 18
ಇವರು ಅವರನ್ನು, ಅವರು ಇವರನ್ನು ಟೀಕಿಸಿದ್ದೇ ಟೀಕಿಸಿದ್ದು. ಆರೋಪ ಮಾಡುವ ಉತ್ಸಾಹದಲ್ಲಿ ಜನರ ನೈಜ ಸಮಸ್ಯೆಗಳನ್ನೇ ನಾಯಕರು ಮರೆತಿದ್ದರು. ಕೊನೆಗೆ ವೈಯಕ್ತಿಕ ವಿಷಯಕ್ಕೂ ಪ್ರಚಾರ ಬಂದು ತಲುಪಿತ್ತು. ಇದು ಕೆಲವರಿಗೆ ಪುಕ್ಕಟೆ ಮನರಂಜನೆ ಒದಗಿಸಿದರೆ, ನಾಯಕರು ಬಳಸುವ ಭಾಷೆ ಅನೇಕರಿಗೆ ಬೇಸರ ತರಿಸಿತ್ತು.
ಎರಡು ತಿಂಗಳಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದತ್ತ ಮತದಾರರನ್ನು ಸೆಳೆಯಲು ನಾಯಕರು ಮಾಡಿದ ಆರೋಪ, ಪ್ರತ್ಯಾರೋಪಗಳಿಂದ ಜನತೆ ರೋಸಿಹೋಗಿದ್ದರು. ಯಾರೇ ಪ್ರಚಾರಕ್ಕೆ ಬಂದರೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ. ನಮಗೆ ಕುಡಿಯಲು ನೀರು ಕೊಡಿ ಎಂದರೆ ಯಾರಿಗೂ ಕೇಳುವ ತಾಳ್ಮೆ ಇರಲಿಲ್ಲ. ಇದೇ ಸಮಯ ಎಂದು ಮರಿ ಪುಡಾರಿಗಳಿಂದ ಹಿಡಿದು ಎಲ್ಲರೂ ಮಾತಿನ ತೆವಲು ತೀರಿಸಿಕೊಂಡರು. ಮರಿ ಪುಡಾರಿಗೂ ರಾಷ್ಟ್ರಮಟ್ಟದ ನಾಯಕರೇ ಟೀಕೆಯ ವಸ್ತು.
ಅಬ್ಬಬ್ಬಾ... ಪ್ರಜ್ಞಾವಂತ ಮತದಾರ ಇದೆಲ್ಲವನ್ನೂ ಮೌನವಾಗಿಯೇ ಆಲಿಸುತ್ತಿದ್ದ. ಯಾರ ಯೋಗ್ಯತೆ ಏನೆಂಬುದನ್ನು ಅರಿತು ತನ್ನ ಹಕ್ಕು ಚಲಾಯಿಸಿದ. ಅದರ ಫಲಿತಾಂಶ ಈಗ ಬಂದಿದೆ.
ವೈಯಕ್ತಿಕ ಟೀಕೆಗೆ ಉತ್ತರ: ಚುನಾವಣಾ ಸಮಯದಲ್ಲಿ ಆರೋಪಗಳು ಸಾಮಾನ್ಯ. ಅದು ಪ್ರತಿಸ್ಪರ್ಧಿಗಳನ್ನು ನೈತಿಕವಾಗಿ ಮಣಿಸುವ ಅಸ್ತ್ರವೂ ಹೌದು. ವಿರೋಧಿಗಳ ವೈಫಲ್ಯ ತಿಳಿಸಿ ಮತ ಕೇಳಬೇಕು. ಆದರೆ ಟೀಕಿಗಳು ವೈಯಕ್ತಿಕ ಮಟ್ಟ ತಲುಪಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಲೋಕಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಸರ್ಕಾರದ ಸಾಧನೆ, ಬೇರೆಯವರ ವೈಫಲ್ಯ, ಆಯ್ಕೆಯಾದರೆ ನಾವು ಏನು ಮಾಡುತ್ತೇವೆ, ಅವರಿದ್ದಾಗ ಏನು ಮಾಡಿದ್ದಾರೆ ಎಂಬುದು ಪ್ರಚಾರದ ವಸ್ತುವಾಗಬೇಕು. ಆದರೆ ಈ ಬಾರಿ ಕಾಂಗ್ರೆಸ್ನವರ ಬಾಯಿಗೆ ಮೋದಿಯೊಬ್ಬರೇ ಸಿಕ್ಕರೆ, ಬಿಜೆಪಿಯವರಿಗೆ ಕಾಂಗ್ರೆಸ್ನ ಅನೇಕ ನಾಯಕರು ಸಿಕ್ಕರು. ಈ ಬಾರಿಯ ಚುನಾವಣೆಯು ಇಂಥ ಅನೇಕ ಟೀಕಿಗಳಿಗೆ ವೇದಿಕೆಯಾಯಿತು. ಇವುಗಳಲ್ಲಿ ಕಾಂಗ್ರೆಸ್ ಮುಖಂಡರಿಂದಲೇ ಇಂಥ ಟೀಕಿಗೆಳು ಹೆಚ್ಚು ಕೇಳಿಬಂದವು.
ಟೀಕೆಯ ಸ್ಯಾಂಪಲ್ಸ್: ಇಲ್ಲಿ ಹಸ್ತದ ಮುಂದೆ ಗುಂಡಿ ಒತ್ತಿ ಟುಂಯ್ ಎಂದಾಗ ಅಲ್ಲಿ ಮೋದಿ ಕುಂಯ್ ಎನ್ನಬೇಕು, ಕಟ್ಟಿಕೊಂಡ ಹೆಂಡತಿಯನ್ನೇ ಬಿಟ್ಟವ ದೇಶವನ್ನು ಹೇಗೆ ಉದ್ಧಾರ ಮಾಡಬಲ್ಲ, ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ, ಬಿಜೆಪಿ ಆಯ್ಕೆಯಾದರೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ, ನರಹಂತಕ ಹೀಗೆ ಏಕ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಎಲ್ಲರೂ ಹರಿಹಾಯ್ದದ್ದೇ ಬಂತು. ಗ್ರಾಪಂ, ನಗರಸಭೆ ಸದಸ್ಯರಾದಿಯಾಗಿ ಟೀಕಿಸಿದ್ದೇ ಟೀಕಿಸಿದ್ದು. ಚಪ್ಪಾಳೆ ಗಿಟ್ಟಿಸಿಕೊಳ್ಳಲು ಪ್ರಚಾರದ ವೇಳೆ ಏನೆಲ್ಲ ಕಸರತ್ತು ಮಾಡಿದರು. ಆದರೆ ಮತದಾರರನ್ನು ಇಂಥ ಕೀಳು ಅಭಿರುಚಿಯ ಪ್ರಚಾರದಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈಗ ಎಲ್ಲರಿಗೂ ಅರಿವಾಗಬೇಕಿದೆ.
ಇನ್ನು ಅಭಿವೃದ್ಧಿ ಬೇಕು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ, ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬರುತ್ತಿದೆ. ಇನ್ನು ಟೀಕೆ, ಆರೋಪಗಳು ಜನರಿಗೆ ಬೇಕಿಲ್ಲ. ಕೆಲಸ ಮಾಡದೇ ಗೆಲ್ಲುವುದು ಇನ್ನು ಕನಸಿನ ಮಾತು ಎಂಬುದು ಎಲ್ಲ ಜನಪ್ರತಿನಿಧಿಗಳಿಗೂ ಮನವರಿಕೆಯಾಗಬೇಕಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿ ಕಟ್ಟುವ ಕಾರ್ಯವೂ ಸಾಕು. ಎರಡು ತಿಂಗಳಿಂದ ಅಬಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಇನ್ನು ಅದಕ್ಕೆಲ್ಲ ಮರು ಚಾಲನೆ ನೀಡಬೇಕಿದೆ. ರೈತರ ಸಮಸ್ಯೆಗಳಿಗೆ ಆದ್ಯತೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ಮುಂದಾಗಬೇಕಿದೆ. ರಾಜ್ಯದಿಂದ ಶಾಸಕರು, ಕೇಂದ್ರದಿಂದ ಸಂಸದರು ಅನುದಾನ ತಂದು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಜನತೆ ಇದನ್ನೇ ನಿರೀಕ್ಷಿಸುತ್ತಿದ್ದಾರೆ.
- ನಾರಾಯಣ ಹೆಗಡೆ