ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪುರಸಭೆ ನಿರ್ಲಕ್ಷ್ಯ: ಎಲ್ಲೆಂದರಲ್ಲಿ ಕಸ

Lingaraj Badiger
Updated On : 19 May 2014, 11:41 am

ಬ್ಯಾಡಗಿ: ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿದ್ದ ಸ್ಥಳೀಯ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದೆಲ್ಲೆಡೆ ಕಸದ ರಾಶಿಗಳು ಬಿದ್ದಿವೆ.
ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕಾಗಿದ್ದ ಪುರಸಭೆ ನಿದ್ದೆ ಮಾಡುತ್ತಿದೆ. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಗಳು ದುರ್ವಾಸನೆ ಸೂಸುತ್ತಿದ್ದು, ಪಟ್ಟಣದಲ್ಲಿ ಒಂದೊಮ್ಮೆ ಪ್ರದಕ್ಷಿಣೆ ಹಾಕಿದರೆ ಆಸ್ಪತ್ರೆಯನ್ನು ಸೇರುವುದು ಗ್ಯಾರಂಟಿ. ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ ಕಾರಣವೆಂಬುದು ಸಾರ್ವಜನಿಕರ ಆರೋಪ.
ಅದರಲ್ಲೂ 7ನೇ ವಾರ್ಡ್ಗೆ ಬರುವ ಮಲ್ಲೂರ ರಸ್ತೆ ಸೇರಿದಂತೆ ವಾರ್ಡ್10 ಹಾಗೂ 13ರ ಮುಖ್ಯರಸ್ತೆ ಚಾವಡಿ ರಸ್ತೆಗಳ ಎರಡೂ ಬದಿಗಳಲ್ಲಿ ಮಾವಿನಹಣ್ಣು, ತರಕಾರಿ ಸೇರಿದಂತೆ ಬಿಡಿ ವಸ್ತು ಮಾರಾಟಗಾರರು ರಸ್ತೆ ಪಕ್ಕದಲ್ಲಿಯೇ (ಪ್ರತ್ಯೇಕ ಸ್ಥಳವಿದ್ದರೂ) ವ್ಯಾಪಾರ ವಹಿವಾಟು ನಡೆಸಿ, ತ್ಯಾಜ್ಯ ವಸ್ತುಗಳನ್ನು ಬಿಟ್ಟು ಹೋಗುತ್ತಾರೆ.
ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೀಗಿದ್ದರೂ ಪುರಸಭೆ ಸದಸ್ಯರಾಗಲಿ, ಅಧಿಕಾರಿಗಳಾಗಲಿ ಈ ಕುರಿತು ಗಮನ ಹರಿಸದೇ ಇರುವುದು ವಿಪರ್ಯಾಸ. ಒಂದು ವೇಳೆ ಸಾರ್ವಜನಿಕರೇ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ಈ ಕುರಿತು ಪರಿಸರ ಅಭಿಯಂತರರನ್ನು ಕೇಳಿದರೆ ಕಸ ತುಂಬುವ ಜೆಸಿಬಿ ದುರಸ್ಥಿಯಲ್ಲಿದೆ ಹೀಗಾಗಿ ಪೌರ ಕಾರ್ಮಿಕರಿಂದ ಕೆಲಸ ನಿರ್ವಹಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ಸಬೂಬು ನೀಡುತ್ತಾರೆ.
ಮುಖ್ಯಾಧಿಕಾರಿ ಹುಡುಕಿಕೊಡಿ: ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮನೋಹರ ಆರ್. ಆಚಾರಿ, ಇದೀಗ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿಗಳು ಬೆಳಗ್ಗೆ ಯಾವುದೇ ವಾರ್ಡ್ಗಳ ವೀಕ್ಷಣೆಗೆ ತೆರಳುತ್ತಿಲ್ಲ ಮಾನ್ಯ ಜಿಲ್ಲಾದಿಕಾರಿಗಳೇ ನಿಮ್ಮ ಮಖ್ಯಾಧಿಕಾರಿಯನ್ನು ಹುಡುಕಿಕೊಡಿ ಎಂದರು.
ಸದರಿ ಮುಖ್ಯಾಧಿಕಾರಿಗಳ ಅಧಿಕಾರದ ಅವಧಿಯಲ್ಲಿ ನಡೆದಿರುವಷ್ಟು ಕಳಪೆ ಕಾಮಗಾರಿ ಪುರಸಭೆಯ ಇತಿಹಾಸದಲ್ಲೇ ನಡೆದಿಲ್ಲ, ಪಟ್ಟಣದ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಕಸ ತುಂಬುವ ಜೆಸಿಬಿಯನ್ನು ದುರಸ್ತಿ ಮಾಡಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement