ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಾಸಕರಲ್ಲಿ ಗರಿಗೆದರಿದ ಮಂತ್ರಿ ಕನಸು

Lingaraj Badiger
Updated On : 20 May 2014, 12:48 pm

- ನಾರಾಯಣ ಹೆಗಡೆ
ಹಾವೇರಿ: ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಶಾಸಕರಲ್ಲೂ ಮಂತ್ರಿಗಿರಿಯ ಕನಸು ಚಿಗುರೊಡೆದಿದೆ. ಜಿಲ್ಲೆಯಲ್ಲಿ 4 ಜನ ಕಾಂಗ್ರೆಸ್ ಶಾಸಕರಿದ್ದರೂ ಒಬ್ಬರಿಗೂ ಮಂತ್ರಿ ಸ್ಥಾನ ಒಲಿದಿರಲಿಲ್ಲ. ಆದರೆ, ಈ ಬಾರಿ ಪ್ರಾಶಸ್ತ್ಯ ಸಿಗುವ ನಿರೀಕ್ಷೆ ಹೊಂದಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಹಿನ್ನಡೆ ಕಂಡಿದೆ. ಇದಕ್ಕೆ ಕೆಲ ಮಂತ್ರಿಗಳ ತಲೆದಂಡ ನಿಶ್ಚಿತ ಎಂದು ಹೇಳಲಾಗುತ್ತಿದ್ದು, ಇದರ ಲಾಭ ಜಿಲ್ಲೆಯ ಶಾಸಕರಿಗೆ ಒಲಿಯುವ ಸಾಧ್ಯತೆಯಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವುದರಿಂದ ಅವರು ತಮ್ಮ ಪದವಿ ಬಿಡಬೇಕಿದೆ. ಜಿಲ್ಲೆಯಲ್ಲಿ 4 ಜನ ಕಾಂಗ್ರೆಸ್ ಶಾಸಕರಿದ್ದರೂ ಒಂದು ವರ್ಷದಿಂದ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಬೇರೆ ಜಿಲ್ಲೆಯವರೇ ಹಾವೇರಿ ಉಸ್ತುವಾರಿ ವಹಿಸಿಕೊಳ್ಳುವಂತಾಗಿತ್ತು. ಈಗ ಹುಕ್ಕೇರಿ ಸ್ಥಾನ ತೆರವಾಗುವುದರಿಂದ ಜಿಲ್ಲೆಯ ಒಬ್ಬ ಶಾಸಕರಿಗೆ ಮಂತ್ರಿ ಪಟ್ಟ ಸಿಗುವುದು ಪಕ್ಕಾ ಆಗಿದೆ.
ಮೂವರು ಮಾಜಿ ಮಂತ್ರಿಗಳು: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಅವರಲ್ಲಿ ಮೂವರು ಮಾಜಿ ಮಂತ್ರಿಗಳು. ಹಾನಗಲ್ಲ ಕ್ಷೇತ್ರದ ಮನೋಹರ ತಹಶೀಲ್ದಾರ, ರಾಣಿಬೆನ್ನೂರಿನ ಕೆ.ಬಿ. ಕೋಳಿವಾಡ ಹಾಗೂ ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಈ ಮೂವರೂ ಮಂತ್ರಿಗಳಾಗಿ ಅನುಭವ ಹೊಂದಿದವರು. ಹಾವೇರಿಯ ರುದ್ರಪ್ಪ ಲಮಾಣಿ ಕಾಂಗ್ರೆಸ್ನ ಮತ್ತೊಬ್ಬ ಎಂಎಲ್ಎ. ಈ ನಾಲ್ವರಲ್ಲಿ ಮಾಜಿ ಮಂತ್ರಿಗಳಲ್ಲಿ ಒಬ್ಬರಿಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಯಾರ ನಡುವೆ ಪೈಪೋಟಿ: ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಸಂಪುಟ ರಚನೆ ವೇಳೆಯಿಂದಲೇ ಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದರು. ಅನೇಕ ಬಾರಿ ತಮಗೆ ಮಂತ್ರಿ ಸ್ಥಾನ ಸಿಗದ್ದಕ್ಕೆ ಬಹಿರಂಗವಾಗಿಯೇ ಅತೃಪ್ತಿಯನ್ನೂ ಹೊರಹಾಕಿದ್ದಾರೆ. ಅದಕ್ಕಾಗಿ ಈಗಲೂ ಅವರು ಕಸರತ್ತು ನಡೆಸುತ್ತಲೇ ಇದ್ದಾರೆ. ಹಾನಗಲ್ಲ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮನೋಹರ ತಹಶೀಲ್ದಾರ ಅವರು ಕೂಡ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. 5 ಬಾರಿ ಶಾಸಕರಾಗಿರುವ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಇದೆ. ಅಲ್ಲದೇ ಕೋಳಿವಾಡರನ್ನು ಹೊರತುಪಡಿಸಿ ಉಳಿದ ಶಾಸಕರ ಒಲವೂ ತಹಶೀಲ್ದಾರ ಕಡೆಗಿದೆ. ಆದ್ದರಿಂದ ಮನೋಹರ ತಹಶೀಲ್ದಾರ ರೇಸ್ನಲ್ಲಿ ಮುಂದಿದ್ದಾರೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಿಎಂ ಸಿದ್ದರಾಮಯ್ಯ ಕೃಪೆ ದೊರೆತರೂ ಆಶ್ಚರ್ಯವಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement