ಅಂಚೆ ಕಚೇರಿಯಲ್ಲಿ ಕೋರ್ ಬ್ಯಾಂಕಿಂಗ್
ಹಾವೇರಿ: ಇಂದಿನ ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ಬದಲಾಗುತ್ತಿರುವ ಜನರ ಬೇಡಿಕೆಗಳಿಗೆ ತಕ್ಕಂತೆ ಭಾರತೀಯ ಅಂಚೆ ಇಲಾಖೆ ನೂತನ ವಿವಿಧ ಸೌಲಭ್ಯಗಳನ್ನು ಹೊರತಂದಿದ್ದು, ಸಾರ್ವಜನಿಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಭಾರತೀಯ ಅಂಚೆ ಇಲಾಖೆ ಹಾವೇರಿ ವಿಭಾಗದ ಅಧೀಕ್ಷಕ ಆರ್.ಜಿ. ಬ್ಯಾಟಪ್ಪನವರ ಕರೆ ನೀಡಿದರು.
ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಜರುಗಿದ ಕೋರ್ ಬ್ಯಾಂಕಿಂಗ್ ಸೌಲಭ್ಯ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಇನ್ಮುಂದೆ ಕೋರ್ ಬ್ಯಾಂಕಿಂಗ್ ಸೌಲಭ್ಯ ಆರಂಭಿಸಲಾಗಿದ್ದು, ಗ್ರಾಹಕರಿಗೆ ಈ ಸೌಲಭ್ಯ ಹೊಂದಿರುವ ಯಾವುದೇ ಅಂಚೆ ಕಚೇರಿಯಲ್ಲಿ ವ್ಯವಹರಿಸಲು ಅನುಕೂಲವಾಗಲಿದೆ. ಈ ಸೌಲಭ್ಯವನ್ನು ಶೀಘ್ರದಲ್ಲಿ ಹಾವೇರಿ ವಿಭಾಗದ ಉಳಿದೆಲ್ಲ ಅಂಚೆ ಕಚೇರಿಗಳು ವಿಸ್ತರಿಸಲಾಗುವುದು ಹಾಗೂ ಜತೆಗೆ ಹಾವೇರಿಯಲ್ಲಿ ಅಂಚೆ ಎಟಿಎಂ ತೆರೆಯಲಾಗುವುದು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಪೋರಂನ ಅಧ್ಯಕ್ಷ ಎಸ್.ಬಿ. ಹಿರೇಮಠ ಮಾತನಾಡಿ, ಅಂಚೆ ಇಲಾಖೆಯಲ್ಲಿ ದೊರೆಯುವ ಎಲ್ಲ ಸೇವೆಗಳನ್ನು ಸಾರ್ವಜನಿಕರು ಸಮರ್ಪಕ ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಉಪ ಅಂಚೆ ಅಧೀಕ್ಷಕ ಎಂ.ವಿ. ಬಸಾಪುರ, ಉಪ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕಿ ದೀಮಾ ಕೆ.ಸಿ., ದೂರು ನಿರೀಕ್ಷಕ ಜಾಫರಸಾಬ್ ಮ್ಯಾಗೇರಿ, ಪ್ರಧಾನ ಅಂಚೆ ಪಾಲಕ ಸಿ.ಕೆ. ಮುತ್ತಗಿ, ಶಿಗ್ಗಾಂವಿ ಉಪ ವಿಭಾಗ ಅಂಚೆ ನಿರೀಕ್ಷಕ ಎನ್.ಜಿ. ಬಂಗಿಗೌಡ್ರ, ರಾಣಿಬೆನ್ನೂರು ಉಪ ವಿಭಾಗ ಅಂಚೆ ನಿರೀಕ್ಷಕ ಜೆ.ಡಿ. ನಿಂಗೋಜಿ ಹಾಗೂ ಅಂಚೆ ಇಲಾಖೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.
ಸರೋಜಾ ಜಿಂಗಾಡೆ ಪ್ರಾರ್ಥಿಸಿದರು. ಮಹ್ಮದಸಾದಿಕ್ ಬಂಕಾಪುರ ಸ್ವಾಗತಿಸಿದರು. ಮಂಜುನಾಥ ಪಾಮೇನಹಳ್ಳಿ ವಂದಿಸಿದರು. ಯಲ್ಲಪ್ಪ ಗೋಣೆಣ್ಣನವರ ನಿರೂಪಿಸಿದರು. ಅಂಚೆ ಇಲಾಖೆಯ ಗ್ರಾಹಕರು ಹಾಗೂ ಎಲ್ಲ ಎಂಪಿಕೆಬಿಐ ಏಜೆಂಟರು ಹಾಜರಿದ್ದರು.