ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಹಿತ್ಯ ಸಮ್ಮೇಳನ: ಮುಂದುವರಿದ ಹಗ್ಗಜಗ್ಗಾಟ, ಜೂ. 4ರಂದು ಹನುಮನಮಟ್ಟಿಯಲ್ಲಿ ಹಾಲಂಬಿ ನೇತೃತ್ವದಲ್ಲಿ ಸಭೆ

Vishwanath S
Updated On : 29 May 2014, 11:14 am

ಹಾವೇರಿ: ಹಲವು ವರ್ಷಗಳ ಬೇಡಿಕೆ ಬಳಿಕ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಹಾವೇರಿ ಜಿಲ್ಲೆಗೆ ಒದಗಿದ್ದರೂ ಸ್ಥಳ ನಿಗದಿ ವಿಚಾರದಲ್ಲಿ ಹಾವೇರಿ ಹಾಗೂ ರಾಣಿಬೆನ್ನೂರು ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಇದು ವೈಯಕ್ತಿಕ ಪ್ರತಿಷ್ಠೆ ಹಂತಕ್ಕೆ ತಲುಪಿದ್ದು, ಎರಡೂ ಕಡೆಯವರಿಂದ ನಾ ಬಿಡೆ, ನೀ ಕೊಡೆ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಮಡಿಕೇರಿ ಸಮ್ಮೇಳನದಲ್ಲಿ ಮುಂದಿನ ಬಾರಿ ಹಾವೇರಿಯಲ್ಲಿ ಸಮ್ಮೇಳನ ಎಂದು ಘೋಷಣೆಯಾದ ಬಳಿಕ ಅದನ್ನು ಕಸಾಪ ಅಧ್ಯಕ್ಷರು ರಾಣಿಬೆನ್ನೂರಿಗೆ ಸ್ಥಳಾಂತರ ಮಾಡಿದ್ದು ಸಾಹಿತ್ಯಾಭಿಮಾನಿಗಳ ನಡುವೆ ಕಂದಕ ನಿರ್ಮಿಸಿದೆ. ಹಾವೇರಿಯಲ್ಲೇ ಸಮ್ಮೇಳನ ಆಗಬೇಕು ಎಂದು ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪ್ರಮುಖರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ರಾಣಿಬೆನ್ನೂರಿನಲ್ಲೇ ಸಮ್ಮೇಳನ ನಡೆಸಲು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದಾರೆ.
ಶಾಸಕರ ಮನವಿ: ಹಾವೇರಿಯಲ್ಲಿ ಈಚೆಗೆ ನಡೆದ ಸಾಹಿತ್ಯಾಸಕ್ತರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಶಾಸಕ ರುದ್ರಪ್ಪ ಲಮಾಣಿ ಅವರು ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾವೇರಿಯಲ್ಲೇ ಸಮ್ಮೇಳನ ನಡೆಸಬೇಕು ಎಂಬುದು ಎಲ್ಲರ ಅಭಿಪ್ರಾಯ. ಆದ್ದರಿಂದ ನಿಮ್ಮ ನೇತೃತ್ವದಲ್ಲೇ ಹಾವೇರಿಯಲ್ಲಿ ಸಭೆ ಕರೆದು ಗೊಂದಲ ನಿವಾರಿಸಬೇಕು. ಕಸಾಪ ಜಿಲ್ಲಾಧ್ಯಕ್ಷರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾಣಿಬೆನ್ನೂರು ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಎಲ್ಲರಲ್ಲಿ ಅತೃಪ್ತಿ ಹೊಗೆಯಾಡುತ್ತಿದೆ. ನೀವು ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ದಾರಿ ತಪ್ಪಿಸಿದ ಜಿಲ್ಲಾಧ್ಯಕ್ಷ: ಮಾತುಕತೆ ವೇಳೆ ಕಸಾಪ ಜಿಲ್ಲಾಧ್ಯಕ್ಷರು ಹಾಲಂಬಿ ಅವರನ್ನು ದಾರಿ ತಪ್ಪಿಸಿರುವುದು ಬಹಿರಂಗವಾಗಿದೆ. ಜನಪ್ರತಿನಿಧಿಗಳು, ಸಾಹಿತಿಗಳು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ರಾಣಿಬೆನ್ನೂರಿನಲ್ಲಿ ಸಮ್ಮೇಳನ ಸ್ಥಳ ನಿಗದಿ ಮಾಡಿರುವುದಾಗಿ ಮಾಸಣಗಿ ಹೇಳಿದ್ದಾರೆ ಎಂದು ಹಾಲಂಬಿ ಶಾಸಕರಿಗೆ ತಿಳಿಸಿದ್ದಾರೆ. ಆದರೆ, ನಮ್ಮನ್ನು ಅವರು ಎಂದೂ ಭೇಟಿಯಾಗಿಲ್ಲ, ಸಮ್ಮೇಳನ ವಿಚಾರವಾಗಿ ಮಾತನಾಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ. ನಿಮ್ಮ ಅಧ್ಯಕ್ಷತೆಯಲ್ಲೇ ಹಾವೇರಿಯಲ್ಲಿ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ಸ್ಥಳ ನಿಗದಿ ಮಾಡಬೇಕು ಎಂದೂ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. ಇದಕ್ಕೆ ಹಾಲಂಬಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜೂ. 4ರಂದು ಸಭೆ: ಸ್ಥಳ ನಿಗದಿ ಕುರಿತು ಎದ್ದಿರುವ ಗೊಂದಲ ನಿವಾರಣೆಗಾಗಿ ಜೂ. 4ರಂದು ಮಧ್ಯಾಹ್ನ 2 ಗಂಟೆಗೆ ರಾಣಿಬೆನ್ನೂರು ಸಮೀಪದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಭೆ ಕರೆಯಲಾಗಿದೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಉಪಸ್ಥಿತಿಯಲ್ಲಿ, ಬಿ.ಜಿ. ಬಣಕಾರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ತಿಳಿಸಿದ್ದಾರೆ.
ಮತ್ತೆ ತಂತ್ರ: ಹಾವೇರಿಯಲ್ಲಿ ಸಭೆ ಕರೆಯುವುದಾಗಿ ಹಾಲಂಬಿ ಅವರು ಶಾಸಕರಿಗೆ ಮಾತು ಕೊಟ್ಟು ಈಗ ಹನುಮನಮಟ್ಟಿಯಲ್ಲಿ ಸಭೆ ಕರೆದಿದ್ದು ಹಾವೇರಿ ಸಾಹಿತ್ಯಾಭಿಮಾನಿಗಳನ್ನು ಕೆರಳಿಸಿದೆ. ಜಿಲ್ಲಾಧ್ಯಕ್ಷರು ಉದ್ದೇಶಪೂರ್ವಕವಾಗಿಯೇ ಹಾವೇರಿಯಿಂದ ಹೊರಗೆ ಸಭೆ ಕರೆದಿದ್ದಾರೆ ಎಂಬ ಅಸಮಾಧಾನ ಹೊರಬೀಳುತ್ತಿದೆ. ಈ ನಡುವೆ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ಸಹಮತ ನೀಡುವಂತೆ ಮನೆಮನೆಗೆ ತೆರಳಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಸಣಗಿ ಹಾಗೂ ಅವರ ಬೆಂಬಲಿಗರಿಂದ ನಡೆಯುತ್ತಿದೆ. ಈ ತಂತ್ರಗಾರಿಕೆಗೆ ತಾವು ಮಣಿಯುವುದಿಲ್ಲ ಎಂದು ನೇರವಾಗಿ ಕೆಲ ಸಾಹಿತಿಗಳು ಹೇಳಿದ್ದಾರೆ. ಗೊಂದಲ ನಿವಾರಣೆಗೆ ಮಧ್ಯ ಪ್ರವೇಶಿಸುವಂತೆ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು, ಸಾಹಿತಿಗಳು ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದಾರೆ.
ಹಾವೇರಿ ಹಾಗೂ ರಾಣಿಬೆನ್ನೂರು ಸ್ಥಳ ನಿಗದಿ ವಿಚಾರ ಈಗ ಸಾಹಿತ್ಯ ವಲಯಯವನ್ನು ಎರಡು ಮಾಡುವ ಹಂತಕ್ಕೆ ಹೋಗಿದೆ. ಸೌಹಾರ್ದಯುತವಾಗಿ ಬಗೆಹರಿಯಬೇಕಿದ್ದ ವಿಷಯ ಈಗ ಪ್ರತಿಷ್ಠೆಗೆ ಕಾರಣವಾಗುತ್ತಿದೆ. ಸಮ್ಮೇಳನದ ಯಶಸ್ಸಿಗೆ ಎರಡೂ ಕಡೆಯವರು ಹಠ ಬಿಟ್ಟು ಒಮ್ಮತದ ನಿರ್ಣಯ ಕೈಗೊಳ್ಳುವುದು ಒಳಿತು. ಶೀಘ್ರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಜಿಲ್ಲೆಯ ಜನರ ಮನಸ್ಸಿನಲ್ಲಿ ಕಂದಕ ನಿರ್ಮಾಣ ಆಗುವುದನ್ನು ತಪ್ಪಿಸುವುದು ಕಸಾಪ ಜಿಲ್ಲಾಧ್ಯಕ್ಷರ ಮೇಲಿದೆ. ಸ್ಥಳ ಗೊಂದಲದ ವಿಚಾರ ಅಂತಿಮ ಘಟ್ಟ ತಲುಪಿದ್ದು, ಜೂ. 4ರಂದು ನಡೆಯುವ ಸಭೆಯ ನಿರ್ಣಯ ಸಮ್ಮೇಳನದ ಯಶಸ್ಸನ್ನು ನಿರ್ಧರಿಸಲಿದೆ.


-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement