ಏನ್ ಸ್ವಾಮಿ ಸಿಲೆಬಸ್?
ಹಾವೇರಿ: ವಿದ್ಯಾರ್ಥಿ ಬದುಕಿನಲ್ಲಿ ದ್ವಿತೀಯ ಪಿಯುಸಿ ಮಹತ್ವದ ಘಟ್ಟವಾದ್ದರಿಂದ ಉತ್ತಮ ಅಂಕ ಗಳಿಸಲು ಆರಂಭದಿಂದಲೇ ತಯಾರಿ ನಡೆಸುತ್ತಾರೆ. ಆದರೆ, ಈ ಬಾರಿ ಜೂ. 2ರಿಂದ ಕಾಲೇಜು ಆರಂಭವಾಗುತ್ತಿದ್ದರೂ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ಪುಸ್ತಕಗಳು ಬಂದಿಲ್ಲ. ಅಷ್ಟೇ ಅಲ್ಲ, ಸಿಲೆಬಸ್ ಏನು ಎಂಬುದೂ ಗೊತ್ತಿಲ್ಲ!
ಅಖಿಲ ಭಾರತ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳೂ ಪೈಪೋಟಿ ನಡೆಸುವಂತಾಗಲು ಹಂತಹಂತವಾಗಿ ರಾಜ್ಯ ಸರ್ಕಾರ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ) ಪಠ್ಯಕ್ರಮ ಅಳವಡಿಸುತ್ತಿದೆ. 2012-13ನೇ ಸಾಲಿನಲ್ಲಿ ಪ್ರಥಮ ಪಿಯುಸಿ, 2013-14ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ವಿಜ್ಞಾನ ಹಾಗೂ ಪ್ರಥಮ ಪಿಯುಸಿ ಕಲಾ, ವಾಣಿಜ್ಯ ವಿಭಾಗಕ್ಕೆ ರಾಷ್ಟ್ರೀಯ ಪಠ್ಯಕ್ರಮ ಅಳವಡಿಸಲಾಗಿದೆ. 2014-15ನೇ ಶೈಕ್ಷಣಿಕ ವರ್ಷಕ್ಕೆ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ಸಿಲೆಬಸ್ ಬದಲಾವಣೆ ಆಗುತ್ತಿದೆ. ಆದರೆ, ಕಾಲೇಜು ಆರಂಭಕ್ಕೆ ಇನ್ನು ಮೂರು ದಿನವಷ್ಟೇ ಬಾಕಿಯಿದ್ದರೂ ಇದುವರೆಗೆ ಇಲಾಖೆ ವೆಬ್‌ಸೈಟ್‌ನಲ್ಲೂ ಸಿಲೆಬಸ್ ಪ್ರಕಟಿಸಿಲ್ಲ. ಪಠ್ಯಪುಸ್ತಕಗಳೂ ಮಾರುಕಟ್ಟೆಗೆ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಉಪನ್ಯಾಸಕರಿಗೂ ಏನು ಕಲಿಸಬೇಕೆಂಬುದು ಗೊತ್ತಾಗುತ್ತಿಲ್ಲ.
ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ: ಸಾಮಾನ್ಯವಾಗಿ ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಬಳಿಕ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸುವ ಸಲುವಾಗಿ ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲೇ ಅಭ್ಯಾಸದಲ್ಲಿ ತೊಡಗುತ್ತಾರೆ. ಆದರೆ, ಈ ಬಾರಿ ದ್ವಿತೀಯ ಪಿಯುಸಿಗೆ ಕಾಲಿಡುತ್ತಿರುವ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಕೈಗೆ ಪುಸ್ತಕ ಸಿಕ್ಕಿಲ್ಲ. ಅಲ್ಲದೆ, ಯಾವ ಸಿಲೆಬಸ್ ಅಳವಡಿಸಲಾಗಿದೆ ಎಂಬ ಮಾಹಿತಿಯೂ ಇಲ್ಲ. ಎರಡು ತಿಂಗಳ ಬೇಸಿಗೆ ರಜೆಯನ್ನು ವಿದ್ಯಾರ್ಥಿಗಳು ಆತಂಕದಲ್ಲೇ ಕಳೆದಿದ್ದಾರೆ. ಜೂ. 2ರಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದು, ಮಾರುಕಟ್ಟೆಗೆ ಪುಸ್ತಕಗಳು ಬಂದಿಲ್ಲ.
ಉಪನ್ಯಾಸಕರಿಗೂ ಸಮಸ್ಯೆ: ತರಗತಿ ಆರಂಭಕ್ಕೂ ಮುನ್ನ ಉಪನ್ಯಾಸಕರು ಪಠ್ಯವಿಷಯವನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಕಾಲೇಜು ಆರಂಭಕ್ಕೆ ಇನ್ನು ಮೂರು ದಿನವಷ್ಟೇ ಬಾಕಿಯಿದ್ದರೂ ಸಿಲೆಬಸ್ ಏನು ಎಂಬುದು ಗೊತ್ತಾಗದೇ ಕಲಾ ಹಾಗೂ ವಾಣಿಜ್ಯ ವಿಷಯದ ಉಪನ್ಯಾಸಕರು ಸಮಸ್ಯೆ ಎದುರಿಸುವಂತಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜೂ. 2ರಿಂದಲೇ ಪಾಠ ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ. ಆದರೆ, ನಮಗೇ ವಿಷಯ ಗೊತ್ತಿಲ್ಲದೆ ವಿದ್ಯಾರ್ಥಿಗಳಿಗೆ ಏನು ಕಲಿಸಬೇಕು? ಎಂಬುದು ಉಪನ್ಯಾಸಕರ ಪ್ರಶ್ನೆ.
-ನಾರಾಯಣ ಹೆಗಡೆ