ಗೊಂದಲ: ಕಸಾಪ ಸಭೆ ಮೊಟಕು
ಹಾನಗಲ್ಲ: ಕ್ಷಮೆ ಕೇಳಿದರೂ ಗೊಂದಲದ ಹೇಳಿಕೆ ನೀಡಿದ ಕಸಾಪ ಜಿಲ್ಲಾಧ್ಯಕ್ಷರು, ಕಸಾಪ ಸದಸ್ಯರಿಗೆ ಧಮಕಿ ಹಾಕಿದ ಹಾನಗಲ್ಲ ಘಟಕದ ಅಧ್ಯಕ್ಷರು - ಈ ಘಟನೆಗಳಿಂದ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಕುರಿತಾದ ಅಭಿಪ್ರಾಯ ಕ್ರೋಡೀಕರಣ ಸಭೆ ಗೊಂದಲದ ಗೂಡಾಗಿ, ಅರ್ಧಕ್ಕೆ ಮೊಟಕುಗೊಂಡಿತು.
ಹಾವೇರಿಯಲ್ಲೇ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿ. ಜಿಲ್ಲೆಯ ಸಾಹಿತ್ಯಾಸಕ್ತರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದನ್ನು ಹಿಂಪಡೆಯಿರಿ ಎಂದು ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು. ಅಲ್ಲದೆ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ಹೊರಟಿರುವುದು ಏಕೆ? ಹಾವೇರಿಯಲ್ಲಿ ಬೇಡ ಎಂದವರಾರು? ಹಾವೇರಿ ಜನತೆಗೆ ಸಮ್ಮೇಳನ ಮಾಡುವ ಇಚ್ಛಾಶಕ್ತಿ ಇಲ್ಲವೆ? ಎಂದು ತರಾಟೆ ತೆಗೆದುಕೊಂಡರು.
ಆಗ ಮಾಸಣಿಗಿ, ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ತಾವು ಪ್ರಕಟಿಸಿದ ನಿಲುವು ಸರಿಯಲ್ಲ. ತಮ್ಮ ನಿರ್ಣಯದ ಪರಿಣಾಮ ಅನಂತರ ತಿಳಿಯಿತು ಎಂದು ಕ್ಷಮೆ ಕೋರಿದರೂ. ಅಲ್ಲದೆ ಆದಾಗ್ಯೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ನಿರ್ಣಯ ಮಾಡಿದ್ದಾಗಿ ಹೇಳಿಕೆ ನೀಡಿದರು. ಅದರಿಂದ ಸಭೆಯಲ್ಲಿ ಗದ್ದಲವಾಯಿತು.
ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯಿಕ ಹಿತ ಕಾಪಾಡಬೇಕಾದ ಜಿಲ್ಲಾಧ್ಯಕ್ಷರೆ, ಪರಿಷತ್ನ ಇತರ ಘಟಕಗಳನ್ನು ವಿಚಾರಿಸದೆ ಇಂಥ ನಿರ್ಣಯ ಮಾಡಿ, ಗೊಂದಲ ಸೃಷ್ಟಿಸಿರುವುದು ಸರಿಯಲ್ಲ ಎಂದು ಸದಸ್ಯರು ವಾದಿಸಿದರು.
ಹಾವೇರಿಯಲ್ಲಿ ಸಭೆ ನಡೆಸಲು ಸೂಕ್ತ ಸ್ಥಳಗಳಿದ್ದರೂ ಹನುಮನಮಟ್ಟಿಯಲ್ಲಿ ಪೂರ್ವಭಾವಿ ಸಭೆ ಕರೆದ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂಥ ಗೊಂದಲಗಳನ್ನು ಹುಟ್ಟುಹಾಕುವ ಬದಲು ಹಿರಿಯರೊಂದಿಗೆ ಸಮಾಲೋಚಿಸಿ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಸಮ್ಮೇಳನ ನಡೆಸುವ ನಿರ್ಣಯ ಪ್ರಕಟಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಧಮಕಿ ಹಾಕಿದ ತಾಲೂಕಾಧ್ಯಕ್ಷ: ಈ ಸಂದರ್ಭ ಮಾತನಾಡಿದ ತಾಲೂಕಾಧ್ಯಕ್ಷ ವಿ.ಜಿ. ಶಾಂತಪುರಮಠ, ರಾಣೆಬೆನ್ನೂರಿನಲ್ಲಿ ಸಮ್ಮೇಳನ ನಡೆಸಲು ಸಹಮತ ವ್ಯಕ್ತಪಡಿಸಿದರು. ಆಗ ಸಭೆಯಲ್ಲಿ ಮತ್ತೆ ಗದ್ದಲ ಆರಂಭವಾಯಿತು. ನಿಮ್ಮ ಸ್ವಂತ ಅಭಿಪ್ರಾಯವನ್ನು ಇಡೀ ತಾಲೂಕಿನ ಅಭಿಪ್ರಾಯವೆಂದು ಬಿಂಬಿಸಿರುವುದು ಸರಿಯಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸದಸ್ಯರೊಂದಿಗೆ ಚರ್ಚಿಸದೆ ವ್ಯವಹರಿಸಿ ತಾಲೂಕಾಧ್ಯಕ್ಷರು ಏಕಪಕ್ಷೀಯ ನಿರ್ಣಯ ತೆಗೆದುಕೊಂಡದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಉದ್ವೇಗಕ್ಕೊಳಗಾದ ವಿ.ಜಿ. ಶಾಂತಪುರಮಠ, 'ನೀವೆಲ್ಲ ಹಾನಗಲ್ಲಿಗೆ ಬನ್ನಿ ನೋಡಿಕೊಳ್ಳುತ್ತೇನೆ' ಎಂದು ಧಮಕಿ ಹಾಕಿದರು. ಆಗ ಸಭೆಯಲ್ಲಿ ಇನ್ನಷ್ಟು ಗದ್ದಲ ಉಂಟಾಯಿತು.
ಸಂದರ್ಭ ಕೈ ಮೀರುತ್ತಿರುವುದನ್ನು ಗಮನಿಸಿದ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ, ವಂದನಾರ್ಪಣೆಗೂ ಅವಕಾಶ ನೀಡದೆ ಸಭೆ ಮುಗಿಸಿ, ಹೊರಟು ಹೋದರು.
ಪ್ರಭು ಹಲಗೇರಿ, ಚನ್ನವೀರಪ್ಪ ಬೆಲ್ಲದ, ನಾಗರಾಜ ಪಾವಲಿ, ಷಣ್ಮುಖಪ್ಪ ಮುಚ್ಚಂಡಿ, ಉದಯಕುಮಾರ ವಿರೂಪಣ್ಣನವರ, ಶಿವಬಸಪ್ಪ ತುಪ್ಪದ, ಸಿದ್ದಲಿಂಗೇಶ ತುಪ್ಪದ, ಡಾ. ಎಸ್.ಎಸ್. ಏರಿಮನಿ, ನಾಗರಾಜ ಅಡಿಗ, ಸದಾಶಿವ ಕಂಬಾಳಿ, ಉಮೇಶ ವಿರೂಪಣ್ಣನವರ, ಕಮಾರ ಧಾರವಾಡ, ಅಶೋಕ ವಿರೂಪಣ್ಣನವರ, ಬಸವರಾಜ ಕೋರಿ, ಫಕ್ಕೀರೇಶ ಕನ್ನೇಶ್ವರ, ಸದಾನಂದ ಉಡುಪಿ, ಕೆ.ಎ. ಬಂಕಾಪುರ, ವಿಜಯ ಪರಶೀ ಕ್ಯಾತಣ್ಣನವರ, ವೀರಭದ್ರಪ್ಪ ಉಪ್ಪಿನ, ಈರಣ್ಣ ಕೋರಿಶೆಟ್ಟರ, ವಿ.ಪಿ. ಗುರಪ್ಪನವರ, ಬಸವರಾಜ ಹರಿಜನ, ಶಂಭಣ್ಣ ಚೌಶೆಟ್ಟಿ ಮುಂತಾದವರಿದ್ದರು.