ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಾಲ್ಯವಿವಾಹಕ್ಕೆ ತಡೆ

Lingaraj Badiger
Updated On : 31 May 2014, 12:10 pm

ಧಾರವಾಡ: ಜಿಲ್ಲಾ ಮಕ್ಕಳ ರಕ್ಷಣಾ ತಂಡ ಹಾಗೂ ಕಿಡ್ಸ್ ಸಂಸ್ಥೆ ಜಂಟಿಯಾಗಿ ಜಿಲ್ಲೆಯ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿ ಬಾಲ್ಯವಿವಾಹಗಳನ್ನು ಶುಕ್ರವಾರ ತಡೆಹಿಡಿದಿವೆ. ಇಲ್ಲಿಯ ಕಾಮನಕಟ್ಟಿ ವೀರಭದ್ರೇಶ್ವರ ದೇವಸ್ಥಾನ, ಮೌನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯವಿವಾಹವನ್ನು ನಿಲ್ಲಿಸಿ, ಇದಕ್ಕೆ ಸಂಬಂಧಿಸಿದಂತೆ ಎರಡು ಕಡೆಯ ಪಾಲಕರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೋಟಿಸ್ ಜಾರಿ ಮಾಡಿದೆ. ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕಿನ ಮನಸೂರಿನ ಅಪ್ರಾಪ್ತೆಗೆ ಮುನವಳ್ಳಿಯ ಯುವಕ ಪಂಚಲಿಂಗಪ್ಪ ಜೊತೆಗೆ ಮದುವೆ ಮಾಡಲು ತಯಾರಿ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ಕಿಡ್ಸ್ ಸಂಸ್ಥೆ ಸಿಬ್ಬಂದಿ, ಬಾಲನಂದನ ಟ್ರಸ್ಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಹರ ಠಾಣೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಜನ್ಮ ಪ್ರಮಾಣಪತ್ರ ಪರಿಶೀಲಿಸಿದರು. ಆಗ ಶಾಲೆ ದಾಖಲಾತಿ ಪ್ರಕಾರ ಬಾಲಕಿಗೆ 18 ವರ್ಷ ತುಂಬಲು 3 ತಿಂಗಳು ಬಾಕಿ ಇತ್ತು. ಅಂಗನವಾಡಿ ಪ್ರಮಾಣಪತ್ರದ ಪ್ರಕಾರ ಬಾಲಕಿ ವಯಸ್ಕಳಾಗಿದ್ದು, ಮದುವೆ ಮಾಡುವುದಾಗಿ ಪಾಲಕರು ಪಟ್ಟು ಹಿಡಿದರು. ಹೀಗಾಗಿ, ಪಾಲಕರಿಗೆ ನೋಟಿಸ್ ನೀಡಿ, ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ನಗರದ ಕಾಮನಕಟ್ಟಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಸವರಾಜ ಗಡ್ಡಿ ಎಂಬವರ ಅಪ್ರಾಪ್ತೆ ಮದುವೆ ನಿಶ್ಚಯವಾಗಿತ್ತು. ಈಕೆಯೂ ಅಪ್ರಾಪ್ತಳಾಗಿದ್ದು, ಬಾಲಕಿಯ ಕುಟುಂಬದವರಿಗೂ ಬಾಲಕಿ ಜನ್ಮದಿನಾಂಕ ಪ್ರಮಾಣಪತ್ರ ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ದಾಳಿಯಲ್ಲಿ ಸಿಡಿಪಿಒ ಹುಲಿಗೆಮ್ಮ ಕುಕನೂರ, ಪಿಎಸ್‌ಐ ಬಸವರಾಜ ಕಾಮನಬೈಲ್, ಮಕ್ಕಳ ರಕ್ಷಣಾ ಘಟಕದ ನಿಂಗಪ್ಪ ಮಡಿವಾಳರ, ಶ್ವೇತಾ ಕಿಲ್ಲೇದಾರ, ಕಿಡ್ಸ್ ಸಂಸ್ಥೆಯ ರಮೇಶ ಕಿತ್ತೂರ, ಗಿರಿಜಾ ಕಳ್ಳಿಮನಿ, ಬಸಲಿಂಗಪ್ಪ ಎನ್, ರಾಜೇಶ್ವರಿ ಕುಂಬಾರ, ಪ್ರೀತಿ ಎನ್.ಕೆ. ಇದ್ದರು.
ಅಧಿಕಾರಿಗಳಿಂದ ತನಿಖೆ
ಹುಬ್ಬಳ್ಳಿ: ಮಹಾಂತೇಶ ಧವನ ಕುಟುಂಬ ವರ್ಗದವರು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಳಗಾವಿಯ ಪೊಲೀಸ್ ಅಧಿಕಾರಿಗಳ ಎರಡು ತಂಡ ಹುಬ್ಬಳ್ಳಿಗೆ ಶುಕ್ರವಾರ ಆಗಮಿಸಿತ್ತು. ಧವನ ಕುಟುಂಬ ವರ್ಗದವರ ಆತ್ಮಹತ್ಯೆಗೆ ಕಾರಣರೆನ್ನಲಾದ ಶ್ರೀ ಸಿಲ್ವರ್ ಪ್ಯಾಲೇಸ್‌ನ ಬೆಳ್ಳಿ ಆಭರಣಗಳ ವ್ಯಾಪಾರಸ್ಥ ಸುರೇಶ ಪಟಾಡಿಯಾ ಆತನ ಪುತ್ರರಾದ ನಿತಿನ್ ಮತ್ತು ಆದರ್ಶ ಕುರಿತಾಗಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ತಂಡ ಕಲೆ ಹಾಕಿದ ಮಾಹಿತಿ ಹಾಗೂ ತಂಡದಲ್ಲಿರುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಲು ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ಹುಬ್ಬಳ್ಳಿಯಿಂದ ಪರಾರಿಯಾದ ಪಟಾಡಿಯಾ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.
ಪ.ಪ. ಕ್ಷೇತ್ರ: ನೀರಲಕೇರಿ ಕಾಂಗ್ರೆಸ್ ಅಭ್ಯರ್ಥಿ
ಧಾರವಾಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನ್ಯಾಯವಾದಿ ಬಿ.ಎಸ್. ನೀರಲಕೇರಿಗೆ ಟಿಕೆಟ್ ಖಚಿತವಾಗಿದೆ. ನೀರಲಕೇರಿ ಅವರು ಈ ಹಿಂದೆ ಹೈಕೋರ್ಟ್ ವಕೀಲರ ಸಂಘ ಹಾಗೂ ಜಿಲ್ಲಾ ವಕೀಲರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಎಸ್ಪಿ ಅಭ್ಯರ್ಥಿಯಾಗಿ ಧಾರವಾಡ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಸದ್ಯ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಂದು ನಾಮಪತ್ರ ಸಲ್ಲಿಕೆ
ಬೆಳಗಾವಿ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಜೂ. 20ರಂದು ನಡೆಯಲಿರುವ ಚುನಾವಣೆಗಾಗಿ ಶುಕ್ರವಾರ ಮೊಹಮ್ಮದಗೌಸ್ ಇಮಾಮಸಾಬ್ ತೋರಗಲ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ದತ್ತಿ ಕಾರ್ಯಕ್ರಮ
ಧಾರವಾಡ: ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಮೇ 31ರ ಸಂಜೆ 5.30ಕ್ಕೆ ದಿ. ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಉದ್ಘಾಟನೆ, ಮಹಾನ್ ಮಹಿಳೆಯರ ಕುರಿತು ಉಪನ್ಯಾಸ ನಡೆಯಲಿದೆ. ಡಾ. ಎಂ.ಐ. ಸವದತ್ತಿ ಉದ್ಘಾಟಿಸಲಿದ್ದು, ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಗುರುದೇವಿ ಹುಲೆಪ್ಪನವರಮಠ, ಅರವಿಂದ ದಳವಾಯಿ, ಪಿ.ಬಿ. ಸಂಕನಗೌಡರ, ಡಾ. ಯು.ಜಿ. ನಲವಡಿ, ಡಾ. ಟಿ.ಜಿ. ಪಾಟೀಲ, ಡಾ. ಎಸ್.ಎನ್. ಮ್ಯಾಗೇರಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement