ಬಂಗಾರಪೇಟೆ: ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಸಾವಿರು ರು. ಪರಿಹಾರ ನೀಡುತ್ತಿದೆ. ಆದರೆ, ಅದನ್ನು ಪಡೆಯಲು ರೈತರು ಹಲವು ಹತ್ತಾರು ಸಮಸ್ಯೆ ಎದುರಿಸಿ ನೂರಾರು ವೆಚ್ಚ ಮಾಡುವಂತಾಗಿದೆ.
2011- 12ನೇ ಸಾಲಿನಲ್ಲಿ ಬರ ಪರಿಹಾರಕ್ಕೆ ಸರ್ಕಾರ ಕೋಟ್ಯಂತರ ರು. ಹಣ ಬಿಡುಗಡೆ ಮಾಡಿದೆ. ಆದರೆ, ಫಲಾನುಭವಿಗಳಿಗೆ ತಲುಪಿಸುವಲ್ಲಿ ತಾಲೂಕು ಆಡಳಿತ, ಕಂದಾಯ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಸಾವಿರಾರು ರೈತರು ಬ್ಯಾಂಕ್ ಹಾಗೂ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ. ಬರುವ ಸಾವಿರಾರು ರು.ಗಳನ್ನು ಕಚೇರಿಗೆ ಸುತ್ತುವುದಕ್ಕೆ ವ್ಯಯಿಸಬೇಕಾಗಿದೆ.
ತಪ್ಪುಗಳ ಸರಮಾಲೆ: ತಾಲೂಕಿನಲ್ಲಿ 12,350 ರೈತರನ್ನು ಕಂದಾಯ ಅಧಿಕಾರಿಗಳು ಗುರುತಿಸಿ ಪಹಣಿಯಲ್ಲಿರುವ ಹೆಸರನ್ನೇ ಬರೆದು ಚೆಕ್ ನೀಡಿದ್ದಾರೆ. ಆದರೆ, ಇದು ರೈತರಿಗೆ ಹಣ ಬರುವುದಕ್ಕಿಂತ ತಾಪತ್ರಯಗಳೇ ಜಾಸ್ತಿಯಾಗಿದೆ.
ಕಂದಾಯ ಇಲಾಖೆ ಮಾಡುವ ನಾನಾ ಯಡವಟ್ಟುಗಳಲ್ಲಿ ಕಾಣಸಿಗುತ್ತದೆ. ಹತ್ತಾರು ತಪ್ಪುಗಳು ಪ್ರತಿಯೊಬ್ಬ ರೈತರ ಕಂದಾಯ ದಾಖಲೆಗಳಲ್ಲಿ ಕಾಣಸಿಗುತ್ತದೆ. ಬರೀ ಪಹಣಿಯಲ್ಲಿದ್ದ ಹೆಸರಗಳನ್ನೇ ಗುರುತಿಸಿ ಚೆಕ್ ಕೊಟ್ಟಿರುವುದು ಅವೈಜ್ಞಾನಿಕ ಕ್ರಮ ಎಂದು ಬ್ಯಾಂಕ್ ಅಧಿಕಾರಿಗಳು ಕಂದಾಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಬಹುತೇಕ ಬ್ಯಾಂಕ್ಗಳು ಚುನಾವಣೆ ಆಯೋಗದ ಗುರುತಿನ ಚೀಟಿ ಆಧಾರದ ಮೇಲೆಯೇ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದಾರೆ. ಆದರೆ, ಇದ್ಯಾವುದು ಮಾನದಂಡ ಉಪಯೋಗಿಸದ ತಾಲೂಕು ಆಡಳಿತ ಏಕಾಏಕಿ ಚೆಕ್ ಬರೆದು ಕೊಟ್ಟಿರುವುದರಿಂದ ಹಣ ಡ್ರಾ ಆಗುತ್ತಿಲ್ಲ.
ತಪ್ಪದ ಅಲೆದಾಟ: ಬ್ಯಾಂಕ್ಗಳು ನಿಯಮ ಮೀರಿ ಹಣ ಕೊಟ್ಟರೆ ಆರ್ಬಿಐ ಹಾಗೂ ಕೆವೈಸಿ ಮಾನದಂಡ ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ ಬ್ಯಾಂಕ್ಗಳು ರಿಸ್ಕ್ ತೆಗೆದುಕೊಳ್ಳದ ಕಾರಣ ರೈತರು ದಿನ ಶುರುವಾದರೆ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಅಲೆಯುವಂತಾಗಿದೆ. ಕೆಲವಡೆ ನಾವು ಬ್ಯಾಂಕ್ಗಳಿಗೆ ಹೇಳುತ್ತೇವೆ, ನೀವು ಹೋಗಿ ಎಂದು ರೈತರನ್ನು ಸಾಗಹಾಕುತ್ತಾರೆ. ಅತ್ತ ಬ್ಯಾಂಕ್ಗಳು ಹಣ ಕೊಡುತ್ತಿಲ್ಲ. ಇದರಿಂದ ರೈತರು ಕಚೇರಿ ಸುತ್ತಿ ಸುತ್ತಿ ಬಸವಳಿಯುತ್ತಿದ್ದಾರೆಯೇ ವಿನಃ ಸರ್ಕಾರ ನೀಡಿದ ಪರಿಹಾರ ಹಣವಂತೂ ಇದುವರೆಗೂ ಕೈ ಸೇರಿಲ್ಲ.
ಒಟ್ಟಿನಲ್ಲಿ ಒಂದು ಸಣ್ಣ ತಪ್ಪಿದ್ದರೂ ಬ್ಯಾಂಕ್ನಲ್ಲಿ ಹಣ ಕೊಡುವುದಿಲ್ಲ. ಇನ್ನು ಹತ್ತಾರು ತಪ್ಪುಗಳಿದ್ದರೆ ಗ್ರಾಹಕನ ಕತೆ ಮುಗಿಯಿತು.
ತಾಲೂಕು ಆಡಳಿತ ಬರಪೀಡಿತ ರೈತರಿಗೆ ನೀಡಿರುವ ಪರಿಹಾರದ ಚೆಕ್ನಲ್ಲಿ ಇದೇ ಸಮಸ್ಯೆ ಇರುವುದರಿಂದ ಪ್ರತಿದಿನ ಸಾವಿರ ರು.ಗಳಿಗೆಗಾಗಿ ನೂರಾರು ರು. ಖರ್ಚು ಮಾಡಿ ಆ ಹಣವನ್ನು ದಕ್ಕಿಸಿಕೊಳ್ಳುವಂತಾಗಿದೆ. ಇನ್ನಾದರೂ ಇಂತಹ ತಪ್ಪುಗಳನ್ನು ಮಾಡದಿರಲಿ ಎಂಬುದು ರೈತರ ಆಗ್ರಹ.