ಕೋಲಾರ

ಜೇಬುಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಕೈದಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿ!

Rashmi Kasaragodu

ಚಿಕ್ಕಬಳ್ಳಾಪುರ: ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದನ್ನರಿಯದೇ ತಮ್ಮ ಜೊತೆಯಲ್ಲಿ ಕೈದಿಯಿದ್ದಾನೆ ಎಂಬ ಭಾವನೆಯಲ್ಲಿದ್ದ ಪೊಲೀಸರು ಕೊನೆಗೆ ಕಕ್ಕಾಬಿಕ್ಕಿಯಾಗಿದ್ದಾರೆ. ತಕ್ಷಣ ಸುತ್ತಮುತ್ತಲು ಹುಡುಕಿದರೂ ಸಹ ಆತ ಪತ್ತೆಯಾಗಿಲ್ಲ. ಈ ಪ್ರಕರಣವನ್ನು ಪೊಲೀಸ್  ಇಲಾಖೆ ಗಂಭೀರವಾಗಿ ತೆಗೆದುಕೊಂಡು ವಿಚಾರಣೆ ಕೈಗೆ ಎತ್ತಿಕೊಂಡಿದೆ. ವಿಚಾರಣಾಧೀನ ಕೈದಿ ರಾಜಶೇಖರ್(19) ಎಂಬ ಆರೋಪಿಯನ್ನು ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಬೇಕಾಗಿತ್ತು. ಆದರೆ, ನ್ಯಾಯಾಲಯದ ಆವರಣದಲ್ಲಿಯೇ ಆರೋಪಿ ಪೊಲೀಸರಿಗೆ ಕೈ ಕೊಟ್ಟಿದ್ದಾನೆ. ನಗರದ ಅಣಕನೂರಿನ ಬಳಿ ಇರುವ ಉಪ ಕಾರಗೃಹದಿಂದ ಜೇಬುಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಗುರುವಾರ 1ನೇ ಅಪರ ನ್ಯಾಯಾಧೀಶರ ಜೆಎಂಎಫ್ಸಿ ನ್ಯಾಯಾಲಯಕ್ಕೆ ವಿಚಾರಣಾಧೀನ ಕೈದಿ ರಾಜಶೇಖರ್‌ನನ್ನು  ಜಿಲ್ಲಾ ಶಸಾಸ್ತ್ರ ಮೀಸಲು ಪಡೆಯ ಪೊಲೀಸರು ಕರೆದುಕೊಂಡು ಬಂದಿದ್ದರು. ನ್ಯಾಯಾಲಯ ಆವರಣದಲ್ಲಿ ಪ್ರವೇಶಿಸುತ್ತಿದ್ದಂತೆ ಪೊಲೀಸರು ತೋಳಿಗೆ ಹಾಕಿದ್ದ ಸರಪಳಿಯನ್ನು ಬಿಡಿಸಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ರಾಜಶೇಖರ್ ಆಂಧ್ರಪ್ರದೇಶದ ಕೂಡೂರುತೋಪು ಗ್ರಾಮದವನಾಗಿದ್ದು, ಕೆಲ ದಿನಗಳಿಂದ ಬಾಗೇಪಲ್ಲಿ ಬಳಿಯ ಸುಂಕಲಮ್ಮ ದೇವಾಲಯದ ಬಳಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಜೂನ್ 16ರಂದು ಆರೋಪಿ ರಾಜಶೇಖರ್ ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಿ ಶಿಡ್ಲಘಟ್ಟ ತೆರಳುವ ಬಸ್ ಹತ್ತಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಎ.ಟಿ. ಕೃಷ್ಣಪ್ಪ ಎಂಬುವವರ ಜೇಬಿನಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದನು. ಬಸ್‌ನಲ್ಲಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಣ ಲಪಟಾಯಿಸಿದ್ದ ಜೇಬುಗಳ್ಳ ಸಿಕ್ಕಿ ಬಿದ್ದಿದ್ದ. ನಂತರ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಹಿಂದೆ ಒಮ್ಮೆ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆ ತರಲಾಗಿತ್ತು. ಎರಡನೇ ಬಾರಿಗೆ ಕರೆ ತಂದ ಸಂದರ್ಭದಲ್ಲಿ ಆತ ಪರಾರಿಯಾಗಿದ್ದಾನೆ.  ಪೊಲೀಸರ ನಿರ್ಲಕ್ಷ್ಯದಿಂದ ಗುರುವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ರಾಜಶೇಖರನ್ನು ಹುಡುಕಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಾಲಯದ ಬಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕರ್ತವ್ಯಲೋಪವೆಸಗಿರುವ ಪೊಲೀಸ್  ಸಿಬ್ಬಂದಿಯ  ಬಗ್ಗೆ ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಸೂಚಿಸಿದ್ದಾರೆ ಎನ್ನಲಾಗಿದೆ.

SCROLL FOR NEXT