ಕೊಪ್ಪಳಕ್ಕೆ ಬಜೆಟ್ನಲ್ಲಿ ಸಿಕ್ಕೀತೆ ಆದ್ಯತೆ?
ಕೊಪ್ಪಳ: ಕಳೆದ ಸಾರಿಯ ಬಜೆಟ್ನಲ್ಲಿ ಜಿಲ್ಲೆಯ ಮೂಗಿಗೆ ತುಪ್ಪ ಸವರಲಾಯಿತೇ ಹೊರತು ಅದನ್ನು ಸವಿಯುವ ಯೋಗ ಜಿಲ್ಲೆಯ ಜನಕ್ಕೆ ಸಿಗಲಿಲ್ಲ. ಈ ಸಾರಿಯ ಬಜೆಟ್ನಲ್ಲಾಗದರೂ ಕೊಪ್ಪಳ ಜಿಲ್ಲೆಗೆ ಆದ್ಯತೆ ಸಿಗಬಹುದು ಎನ್ನುವ ಅಶಾಭಾವನೆ ಮೂಡಿದೆ. ಆದರೆ, ಅದು ಎಷ್ಟರಮಟ್ಟಿಗೆ ಎನ್ನುವುದು ಬಜೆಟ್ ಮಂಡನೆಯ ನಂತರವೇ ಗೊತ್ತಾಗಲಿದೆ.
ಕಳೆದ ಸಾರಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆಗೆಯುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಲಾಯಿತು. ಅಚ್ಚರಿ ಎಂದರೆ ಅದಕ್ಕೆ ಯಾವುದೇ ರೀತಿಯ ನಿಗದಿತ ಅನುದಾನವಾಗಲಿ, ಯೋಜನೆಯನ್ನಾಗಲಿ ರೂಪಿಸಲಿಲ್ಲ. ವರ್ಷ ಮುಗಿದರೂ ಅದಿನ್ನು ಅನುಷ್ಠಾನವೇ ಆಗಲಿಲ್ಲ.
ದುರಂತ ಎಂದರೆ 2008ರಲ್ಲಿ ಮಾಡಿದ ಸರ್ವೇಯನ್ನು ಕಳೆದ ವರ್ಷ ಅಧಿಕೃತಗೊಳಿಸಲಾಗಿದೆ. ಪ್ರತಿವರ್ಷ ಸರಾಸರಿ 0.75 ಟಿಎಂಸಿ ಹೂಳು ತುಂಬುತ್ತದೆ ಎನ್ನುವ ಅಘಾತಕಾರಿ ವರದಿ ನೀಡಲಾಯಿತು. ಹೀಗೆ, ಪ್ರತಿ ವರ್ಷ ಹೂಳು ತುಂಬಿದರೇ ಜಲಾಶಯ ಕೇವಲ ಸ್ಮಾರಕವಾಗುವುದರಲ್ಲಿ ಅನುಮಾನವಿಲ್ಲ. ಇಂಥ ಮಹತ್ವಾಕಾಂಕ್ಷಿ ಜಲಾಶಯಕ್ಕೆ ಈ ಸಾರಿಯಾದರೂ ಬಜೆಟ್ನಲ್ಲಿ ಮಾನ್ಯತೆ ನೀಡಿ, ಹೂಳು ತೆಗೆಯುವ ಇಲ್ಲವೇ ಪರ್ಯಾಯ ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಹೀಗೆ, ತುಂಗಭದ್ರಾ ನದಿಯಿಂದ ಹರಿದು ಹೋಗುವ ನೀರು ಬಳಸಲು ಸಮಾಂತರ ಜಲಾಶಯ, ಏತ ನೀರಾವರಿ ಯೋಜನೆಗಳು, ಹಿರೇಹಳ್ಳ ಜಲಾಶಯ ಎತ್ತರ ಹೆಚ್ಚಳ, ಕೆರೆ ತುಂಬಿಸುವ ಯೋಜನೆ, ಪ್ರವಾಹ ಹರಿವು ಕಾಲುವೆ ನಿರ್ಮಾಣ ಯೋಜನೆ, ಕೃಷ್ಣಾ ಬಿ ಸ್ಕೀಂ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಹಣದ ಕೊರತೆಯಿಂದ ಬಳಲುತ್ತಿವೆ.
ವಿಶೇಷವಾಗಿ ಜಲಾಶಯ ನಿರ್ಮಾಣವಾಗಿ ಕಾಲುವೆ ಇಲ್ಲದೆ ನೀರು ಬಳಕೆ ಮಾಡಿಕೊಳ್ಳಲು ಆಗದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಅನುದಾನ ಸಿಗುತ್ತದೆ ಎನ್ನುವ ನಿರೀಕ್ಷೆ ಜನರದ್ದಾಗಿದೆ. ಈ ಎಲ್ಲ ಯೋಜನೆಗಳಿಗೆ ಸರ್ಕಾರ ಕಾಲಮಿತಿ ಯೋಜನೆ ರೂಪಿಸಿ, ಅನುದಾನ ನೀಡಿದ್ದೇ ಆದರೆ ಕೊಪ್ಪಳ ಜಿಲ್ಲೆಯ ಬರದ ಬವಣೆ ತಪ್ಪಲಿದೆ.
ಶಿಕ್ಷಣ: ಜಿಲ್ಲೆಯಾಗಿ 15-16 ವರ್ಷವಾಗುತ್ತ ಬಂದರೂ ಇಲ್ಲಿವರೆಗೆ ಜಿಲ್ಲಾದ್ಯಂತ ಉನ್ನತ ಶಿಕ್ಷಣ ಸಿಗುತ್ತಿಲ್ಲ. ಎಲ್ಲದಕ್ಕೂ ಪಕ್ಕದ ಧಾರವಾಡ ಅಥವಾ ಗುಲಬರ್ಗಾಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕೃಷ್ಣದೇವರಾಯ ವಿವಿಯ ಸ್ನಾತಕ್ಕೋತ್ತರ ಕೇಂದ್ರವನ್ನು ಕೊಪ್ಪಳದಲ್ಲಿ ಪ್ರಾರಂಭಿಸುವ ಮೂಲಕ ಈ ಭಾಗದಲ್ಲೂ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ಈ ಹಿಂದೆ ಗುಲಬರ್ಗಾ ವಿವಿ ಇದಕ್ಕೆ ಉತ್ಸುಕವಾಗಿತ್ತಾದರೂ, ಸೂಕ್ತ ಜಾಗ ಸಿಗದೆ ಅದು ನೆನೆಗುದಿಗೆ ಬಿದ್ದಿದೆ.
ಇಲ್ಲಿ ಸ್ಥಳೀಯವಾಗಿ ಉನ್ನತ ಶಿಕ್ಷಣ ದೊರೆಯದೇ ಇರುವುದರಿಂದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಶೇ. 10ರಷ್ಟು ವಿದ್ಯಾರ್ಥಿಗಳೂ ಉನ್ನತ ವ್ಯಾಸಂಗ ಮಾಡುವುದಿಲ್ಲ. ಇದನ್ನು ಸರಿಪಡಿಸಲು ಸ್ಥಳೀಯವಾಗಿ ಸ್ನಾತಕೋತ್ತರ ಕೇಂದ್ರ ತೆರೆಯುವುದು ಅನಿವಾರ್ಯವಾಗಿದೆ. ಇನ್ನು ಈಗಾಗಲೇ ಮಂಜೂರಾಗಿರುವ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅಗತ್ಯ ಅನುದಾನ ನೀಡಬೇಕು. ಇದಕ್ಕಿಂತ ಮಿಗಿಲಾಗಿ ಈ ಸಾರಿ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಅಗತ್ಯವಿದೆ. ಈ ಹಿಂದೆ ಘೋಷಣೆ ಮಾಡಿರುವ ಸ್ಟೀಲ್ ಪಾರ್ಕ್ ಸ್ಥಾಪನೆ ಇದುವರೆಗೂ ಆಗಿಲ್ಲ.
ಇದಲ್ಲದೆ ಕೃಷಿ ಆಧಾರಿತ ಕಾಲೇಜುಗಳು, ಅರಣ್ಯೀಕರಣ ಯೋಜನೆ ಅಡಿ ತೋಟಗಾರಿಕೆ ಬೆಳವಣಿಗೆಗೆ ವಿಶೇಷ ಪ್ಯಾಕೇಜ್ ನೀಡುವ ಅಗತ್ಯವಿದೆ. ಇನ್ನು ದಾಳಿಂಬೆ ಬೆಳೆಗಾರರ ಪ್ರಗತಿ ಮತ್ತು ಸಾಲ ಮನ್ನಾ ತೀರಾ ಅಗತ್ಯವಿದ್ದು, ಇದು ಮುಖ್ಯಮಂತ್ರಿಗಳೇ ನೀಡಿದ ಭರವಸೆಯಾಗಿರುವುದರಿಂದ ಅದನ್ನಾದರೂ ಜಾರಿ ಮಾಡಬೇಕು ಎನ್ನುವುದು ದಾಳಿಂಬೆ ಬೆಳೆಗಾರರ ಆಗ್ರಹವಾಗಿದೆ.
ಗವಿಮಠಕ್ಕೆ ನೆರವು: ಸಣ್ಣಪುಟ್ಟ ಮಠಗಳಿಗೆ ಕೋಟಿ ಕೋಟಿ ಕೊಟ್ಟಿರುವ ರಾಜ್ಯ ಸರ್ಕಾರ ಸುಮಾರು 1100 ವಿದ್ಯಾರ್ಥಿಗಳನ್ನು ಸಲುಹುತ್ತಿರುವ ಗವಿಮಠಕ್ಕೆ ಕಳೆದ ಸಾರಿ ಕೇವಲ ರು. 50 ಲಕ್ಷ ನೀಡಿದೆ. ಆದರೆ, ಈ ಸಾರಿಯಾದರೂ ಅದನ್ನು ಕನಿಷ್ಠ ರು. 2 ಕೋಟಿಗೆ ಏರಿಸುವ ಮೂಲಕ ಮಠದಲ್ಲಿನ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.
-ಸೋಮರಡ್ಡಿ ಅಳವಂಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.