ಪಿಂಚಣಿಗೆ ಒತ್ತಾಯಿಸಿ ಪ್ರತಿಭಟನೆ
ಕೊಪ್ಪಳ: ಸರ್ಕಾರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಟ್ಟದ ನವೋದಯ ವಿದ್ಯಾಲಯ ಸಿಬ್ಬಂದಿ ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೇಶಾದ್ಯಂತ ನವೋದಯ ಶಾಲೆಗಳಲ್ಲಿ ಅನೇಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಪಿಂಚಣಿ ಇಲ್ಲದಂತಾಗಿದೆ. 25 ವರ್ಷಕ್ಕೂ ಹೆಚ್ಚು ಕಾಲ ನವೋದಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸರ್ಕಾರ ಮಾತ್ರ ತಮ್ಮ ಬೇಡಿಕೆಗೆ ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು. ಅಲ್ಲದೇ, ನವೋದಯ ಸಿಬ್ಬಂದಿ ವರ್ಗಕ್ಕೆ ಪಿಂಚಣಿ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿಯೇ ಸುಮಾರು 36 ಜನರು ನವೋದಯ ಶಾಲೆ ಸೇರಿದಂತೆ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರು ಪಿಂಚಣಿ ಇಲ್ಲದೆ ದುಡಿಯುತ್ತಿದ್ದಾರೆ.
ಸರ್ಕಾರ ಪಿಂಚಣಿ ನೀಡುವುದರಿಂದ ಸಿಬ್ಬಂದಿ ವರ್ಗದ ಕುಟುಂಬಕ್ಕೂ ಮುಂದೆ ಅನುಕೂಲವಾಗಲಿದೆ ಎಂದು ಸರ್ಕಾಕ್ಕೆ ಮನವಿ ಮಾಡಿದರು.
ಇಲ್ಲಿಯ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನವೋದಯ ಸಿಬ್ಬಂದಿ ವರ್ಗ, ಜಿಲ್ಲಾಧಿಕಾರಿ ಕಚೇರಿ ವರೆಗೂ ಮೆರವಣಿಗೆ ನಡೆಸಿ, ಪಿಂಚಣಿಗಾಗಿ ಸರ್ಕಾರಕ್ಕೆ ಮೋರೆ ಇಟ್ಟಿತು.
ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಕೆಗೆ ಸಿಬ್ಬಂದಿ ಒತ್ತಾಯಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ನವೋದಯ ಸಿಬ್ಬಂದಿ ಮೇಘರಾಜ ಜದಗಿ, ಎಂ.ಎಸ್. ಶಿವಶಂಕರ, ಎಂ.ಬಿ. ಕುಲಕರ್ಣಿ, ಎಂ.ಎಸ್. ಒಂಟಮುರಿ, ಸಾವಿತ್ರಿ ದಾವಂಡೆ, ಆರ್.ಎಚ್. ಸಣ್ಣಗೌಡರ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.