ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಮೊದ್ಲು ಕರೆಂಟ್ ಕೊಟ್ಟು ಮಾತಾಡ್ರಿ

Parashurama
Updated On : 8 Feb 2013, 11:00 am

ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 7
ಹಳ್ಳಿಗಳಲ್ಲಿ ಎರಡು ತಾಸೂ ವಿದ್ಯುತ್ ನಿಲ್ತಿಲ್ಲ. ರೈತ್ರು ಹೊಲ್ದಾಗ ನೀರಿಲ್ದ ತುಂಬಾ ಕಷ್ಟ ಪಡ್ತಾರ. ಅಧಿಕಾರಿಗಳೇ? ನೀವು ಬಿಸ್ಲೇರಿ ನೀರು ಕುಡಿತೀರಿ? ಆದ್ರೆ ನಾವು ಯಾವ ನೀರು ಕುಡೀಬೇಕು? ಮೊದ್ಲೂ ಸರ್ಕಾರಿ ನಿಯಮದಂಗ ಕರೆಂಟ್ ಕೊಡ್ರೀ. ಆಮೇಲ ಮಾತಾಡ್ರಿ...
ಇದು ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿದ್ಯುತ್ ಬಳಕೆದಾರರ ಜಾಗೃತಿ ಶಿಬಿರದಲ್ಲಿ ರೈತರಿಂದ ವ್ಯಕ್ತವಾದ ಆಕ್ರೋಶದ ಮಾತು. ಸಭೆಯಲ್ಲಿ ಗುಲಬುರ್ಗಾ ಜೆಸ್ಕಾಂ ಅಧಿಕಾರಿಗಳನ್ನು ರೈತರು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು.
ಸರ್ಕಾರದ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶಕ್ಕೆ 6 ತಾಸು ಮೂರು ಫೇಸ್ ಮತ್ತೆ 8 ತಾಸು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕಾದ ಜೆಸ್ಕಾಂ ಅಧಿಕಾರಿಗಳು ತಮಗೆ ತಿಳಿದ ಹಾಗೆ ಮಾಡುತ್ತಿದ್ದಾರೆ. ಅವರ ಚೆಲ್ಲಾಟದಿಂದ ರೈತರು ಬೇಸತ್ತು ಸಾಯುವ ಸ್ಥಿತಿ ತಲುಪಿದ್ದಾರೆ. ಈ ಸಂಬಂಧ ಅನೇಕ ಬಾರಿ ಜೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದೇವೆ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ನಿಯಮದ ಪ್ರಕಾರ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಇಲ್ಲದೇ ಜನ-ಜಾನುವಾರುಗಳು ನೀರಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ತೊಂದರೆಯಾಗುತ್ತಿದೆ ಎಂದು ರೈತನೋರ್ವ ಜಾಗೃತಿ ಶಿಬಿರದಲ್ಲಿ ಅಧಿಕಾರಿಗಳ ಅಸಡ್ಡೆಗೆ ಆಕ್ರೋಶ ವ್ಯಕ್ತಪಡಿಸಿದನು.
ಇನ್ನು ವಿದ್ಯುತ್ ಇಲ್ಲದೇ ಮಕ್ಕಳ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಅಧಿಕಾರಿಗಳ ಮಕ್ಕಳು ಮಾತ್ರ ವಿದ್ಯುತ್ ದೀಪದಲ್ಲಿ ಅಭ್ಯಾಸ ಮಾಡಬೇಕು. ಆದರೆ, ರೈತರ ಮಕ್ಕಳು ಚಿಮಣಿ ಬೆಳಕಿನಲ್ಲಿ ಓದಬೇಕೇ ಎಂದು ಇಂದರಗಿ ರೈತ ಹುಚ್ಚಪ್ಪ ಹಿರೆಕುರಬರ್ ತರಾಟೆಗೆ ತಗೆದುಕೊಂಡರು.
ಇದಕ್ಕೆ ಉತ್ತರಿಸಿದ ನೀಲಾ ನಾಯಕ್, ಸರ್ಕಾರದ ನಿಯಮದಂತೆ ವಿಭಾಗವಾರು ವಿದ್ಯುತ್ ಹಂಚಿಕೆ ಮಾಡಿ ಪೂರೈಸಲಾಗುತ್ತಿದೆ. ಅದರಲ್ಲಿಯೇ ನಿಗದಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ತೊಂದರೆ ಕಾಣುತ್ತಿಲ್ಲ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ನೀವು ಇಲ್ಲಿಯೇ ಕುಳಿತು ಸರಳ ಮಾತಾಡ್ತೀರಿ. ಆದರೆ, ನಮ್ಮ ಸಮಸ್ಯೆ ನಿಮಗೇನ್ ಗೊತ್ತು? ಒಂದು ದಿನದಲ್ಲಿ 10 ಸಾರಿ ಲೋಡ್ ಶೆಡ್ಡಿಂಗ್ ಅಂತ ವಿದ್ಯುತ್ ಕಟ್ ಮಾಡ್ತೀರಿ... ಕೇಳಿದ್ರ ಮೇಲಿಂದ ಲೋಡ್‌ಶೆಡ್ಡಿಂಗ್ ಆಗಿದೆ ನಾವು ಮಾಡಿಲ್ಲ ಅಂತ ಹೇಳ್ತೀರಿ..... ನಾವು ಯಾರನ್ನ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಟಾಪಟಿ: ಈ ಹಂತದಲ್ಲಿ ರೈತರು ಅಧಿಕಾರಿಗಳ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ, ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಆಗ ಕೆಲ ಜೆಸ್ಕಾಂನ ಕೆಲ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರೈತರನ್ನು ಸಮಾಧಾನ ಪಡಿಸಿದರು. ಸಭೆಯಲ್ಲಿ ಎಂ.ಎನ್. ಪತ್ತಾರ ಹಾಗೂ ಸಹಾಯಕ ಅಭಿಯಂತರರು, ರೈತರು ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments