ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಕನ್ನಡ ಜಾಗೃತಿ: ರಾಜ್‌ಕುಮಾರ್ ಸೈಕಲ್ ಯಾತ್ರೆ

Parashurama
Updated On : 10 Feb 2013, 11:31 am

ಕನ್ನಡಪ್ರಭ ವಾರ್ತೆ, ಕುಷ್ಟಗಿ, ಫೆ. 9
ಕನ್ನಡ ಭಾಷೆ ಜಾಗೃತಿ ಮೂಡಿಸಲು ತುಮಕೂರು ಜಿಲ್ಲೆ ಕುಣಿಗಲ್ ನಿವಾಸಿ ಎಚ್.ಎನ್. ರಾಜಕುಮಾರ ಅವರು ಕಳೆದ 13 ವರ್ಷಗಳಿಂದ ಸೈಕಲ್ ಯಾತ್ರೆ ನಡೆಸಿದ್ದಾರೆ.
ಅದೇ ರೀತಿ ಬಿಜಾಪುರದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಅಂಗವಾಗಿ ಕನ್ನಡ ಭಾಷೆ ಉಳಿಸಲು ಹಾಗೂ ಜಾಗೃತಿ ಮೂಡಿಸಲು ಕುಣಿಗಲ್ ಖಾಸಗಿ ಶಾಲೆಯ ಚಿತ್ರಕಲಾ ಶಿಕ್ಷಕ ರಾಜಕುಮಾರ, ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ.
ದಾರಿಯುದ್ದಕ್ಕೂ ವಿವಿಧ ಗ್ರಾಮ, ಪಟ್ಟಣಗಳಲ್ಲಿ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಬಿಜಾಪುರದ ಸಾಹಿತ್ಯ ಹಬ್ಬಕ್ಕೆ ಆಹ್ವಾನ ಕೂಡ ನೀಡಿದ್ದಾರೆ.
ಹಗಲು-ರಾತ್ರಿ ಎನ್ನದೆ ಕಳೆದ 6 ದಿನಗಳಿಂದ ಸೈಕಲ್ ಸವಾರಿಯಲ್ಲಿರುತ್ತ, ನಿತ್ಯ 3 ತಾಸು ಮಾತ್ರ ವಿಶ್ರಾಂತಿ ಪಡೆದು, ಸುಮಾರು 300ಕ್ಕೂ ಹೆಚ್ಚು ಕಿ.ಮೀ. ಕ್ರಮಿಸಿರುವ ಶಿಕ್ಷಕ ರಾಜಕುಮಾರ. ತಮ್ಮ 13 ವರ್ಷಗಳಲ್ಲಿ ಸೈಕಲ್ ಯಾತ್ರೆ ಮೂಲಕವೇ ವಿಶ್ವ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕನ್ನಡ ಪ್ರೇಮ ಸಾರಿದ್ದೇನೆ ಎಂದರು.
ಸೈಕಲ್ ಯಾತ್ರೆಯಿಂದ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಿಂದ ವಿಶಿಷ್ಟ ರೀತಿಯ ಅನುಭವ ಹೊಂದಿರುವ ನನಗೆ ವಿವಿಧ ಪ್ರಾಂತ್ಯಗಳಲ್ಲಿ ಕನ್ನಡ ಭಾಷೆ ಬಗ್ಗೆ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಪ್ರೀತಿ ಹಾಗೂ ಗೌರವ ಕಂಡು ಬರುತ್ತದೆ ಎಂದರು.
ಇನ್ನು ಪಟ್ಟಣದಲ್ಲಿ ತೋರಿಕೆ ಭಾಷಾ ಪ್ರೇಮವಿದ್ದು, ಇಲ್ಲೇ ಕನ್ನಡ ಭಾಷೆ ಹಾಗೂ ಸಾಹಿತ್ಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ಸರ್ಕಾರ, ಸಾಹಿತಿಗಳು ಹಾಗೂ ಕನ್ನಡ ಪರ ಸಂಘಟನೆಗಳಿಂದ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಕುಣಿಗಲ್ ರಾಜಕುಮಾರ.
ಜಾಗೃತಿ ಯಾತ್ರೆಗಳು ಬೇಕು
ಸೈಕಲ್, ಬೈಕ್‌ಗಳಂಥ ಕನ್ನಡ ಭಾಷೆ ಜಾಗೃತಿ ಯಾತ್ರೆಗಳು ನಾಡಿನ ಪ್ರತಿಯೊಬ್ಬ ಕನ್ನಡಿಗನಿಂದ ನಡೆಯಬೇಕಿದೆ. ಇದರಿಂದ ರಾಜ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ ಬಗ್ಗೆ ಹೆಚ್ಚು ಅರಿವು, ಪ್ರೇಮ ಹಾಗೂ ಗೌರವ ಮೂಡುತ್ತದೆ. ಜತೆಗೆ ದೇಹಕ್ಕೆ ವ್ಯಾಯಾಮ ಹಾಗೂ ನಾಡಿಗೆ ಸೇವೆ ಸಲ್ಲಿಸದಂತಾಗುತ್ತದೆ ಎಂದು ಯಾತ್ರಿಕ ಕುಣಿಗಲ್ ರಾಜಕುಮಾರ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments